ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೆಟ್ರೋಲಿಯಂ ದರಯೇರಿಕೆ; ಮಿತ್ರಪಕ್ಷಗಳೊಂದಿಗೆ ಸರಕಾರ ಚರ್ಚೆ (fuel price hike | Pranab Mukherjee | Congress MPs | Sonia Gandhi)
Bookmark and Share Feedback Print
 
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಕುರಿತಂತೆ ಎದ್ದಿರುವ ವಿವಾದಗಳಿಗೆ ಸಂಬಂಧಿಸಿದಂತೆ ಯುಪಿಎ ಮಿತ್ರಪಕ್ಷಗಳ ಜತೆ ಸರಕಾರವು ಮಾತುಕತೆ ನಡೆಸಲಿದೆ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಬುಧವಾರ ತಿಳಿಸಿದ್ದು, ನಿರ್ಧಾರದಿಂದ ಹಿಂದಕ್ಕೆ ಸರಿಯುವ ಸಾಧ್ಯತೆಗಳು ಕಡಿಮೆ ಎಂಬ ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ.

ಬೆಲೆಯೇರಿಕೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದರನ್ನು ಭೇಟಿಯಾಗಿರುವ ಮುಖರ್ಜಿಯವರು, ಬಜೆಟ್ ಪ್ರಮುಖ ಅಂಶಗಳನ್ನು ವಿವರಿಸಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೀಮಾ ಸುಂಕವನ್ನು ಕಡಿತಗೊಳಿಸುವುದು ಏಕೆ ಅಸಾಧ್ಯ ಎಂಬುದನ್ನು ಮನದಟ್ಟು ಮಾಡಿದರು ಎಂದು ಪಕ್ಷದ ಮೂಲಗಳು ಹೇಳಿವೆ.

ಪ್ರಸಕ್ತ ಆರ್ಥಿಕ ಪರಿಸ್ಥಿತಿಯಲ್ಲಿ ಸರಕಾರದ ಎದುರು ಇರುವ ಸವಾಲುಗಳ ಕುರಿತು ಕಾಂಗ್ರೆಸ್ ಸಂಸದರಿಗೆ ವಿತ್ತ ಸಚಿವರು ಮಾಹಿತಿ ನೀಡಿದರು ಎಂದು ಹೇಳಲಾಗಿದೆ.

ಈ ಬಾರಿಯ ಮುಂಗಡ ಪತ್ರದಲ್ಲಿ ಯಾವುದೇ ಹೊಸ ತೆರಿಗೆಗಳನ್ನು ಸರಕಾರ ವಿಧಿಸಿಲ್ಲ. ಇನ್ನೇನು ಮುಕ್ತಾಯ ಕಾಣಲಿರುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶವು ಶೇ.7.2ರ ಜಿಡಿಪಿ ನಿರೀಕ್ಷೆಯಲ್ಲಿದ್ದು, ಇದನ್ನು ಶೇ.8.5ಕ್ಕೆ ಹೆಚ್ಚಿಸುವ ಇರಾದೆ ಸರಕಾರದ್ದಾಗಿದೆ. ಅದಕ್ಕಾಗಿ ಆದಾಯದಲ್ಲಿ ಹೆಚ್ಚಳಗೊಳಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಸಾಮಾಜಿಕ ಕ್ಷೇತ್ರದ ಯೋಜನೆಗಳಲ್ಲಿ ಸರಕಾರವು ಹೆಚ್ಚಿನ ಹೂಡಿಕೆ ಮಾಡುವ ಯೋಜನೆಗಳನ್ನು ಹೊಂದಿದೆ ಎಂದು ಮುಖರ್ಜಿಯವರು ವಿವರಿಸಿದರು ಎಂದು ಮೂಲಗಳು ಹೇಳಿವೆ.

ಈ ಸಂದರ್ಭದಲ್ಲಿ ಅವರು ಯುಪಿಎ ಮತ್ತು ಎನ್‌ಡಿಎ ಅಧಿಕಾರಾವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯಾಗಿರುವ ಪಟ್ಟಿಯನ್ನೇ ಸಂಸದರಿಗೆ ತೋರಿಸಿದರು. ಎನ್‌ಡಿಎ ಅಧಿಕಾರಾವಧಿಯಲ್ಲಿ ಯುಪಿಎಗಿಂತ ಹೆಚ್ಚು ಬೆಲೆಯೇರಿಕೆಯಾಗಿರುವ ಅಂಶಗಳನ್ನು ಅವರು ವಿವರಿಸಿದರು.

ಅಲ್ಲದೆ ಎನ್‌ಡಿಎ ಅಧಿಕಾರಾವಧಿಗೆ ಹೋಲಿಸಿದರೆ ಯುಪಿಎ ಅವಧಿಯಲ್ಲಿ ಆಹಾರ ವಸ್ತುಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆ ದ್ವಿಗುಣಗೊಳಿಸಲಾಗಿರುವ ವಿಚಾರವನ್ನೂ ಮುಖರ್ಜಿಯವರು ಸಂಸದರಿಗೆ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ