ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮೇಲಿನ ಚರ್ಚೆ ಸಂದರ್ಭ ಎರಡು ಬಾರಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಲೋಕಸಭೆಯ ಮಾಜಿ ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ನಡುವೆ ಪರಸ್ಪರ ವಾಗ್ವಾದ ಮಾಡಿಕೊಂಡರು.
ತಾನು ಕಾಶ್ಮೀರ ವಿವಾದ ಪರಿಹರಿಸಲು ಯತ್ನಿಸಿರುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಚುನಾವಣಾ ಪ್ರಚಾರಾವಧಿಯಲ್ಲೇ ಎರಡು ಬಾರಿ ಬಹಿರಂಗವಾಗಿಯೇ ಹೇಳಿದ್ದರು. ಈ ಮೊದಲು, ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸುವುದೇ ಇಲ್ಲ ಎಂದು ಹೇಳುತ್ತಿದ್ದ ಅಮೆರಿಕದ ನಿಲುವಿನಲ್ಲಿ ಈ ರೀತಿ ಬದಲಾವಣೆಯಾಗಿದ್ದು ಭಾರತಕ್ಕೆ ಹಿನ್ನಡೆ ಎಂದು ಆಡ್ವಾಣಿ ತಮ್ಮ ಮಾತಿನ ವೇಳೆ ನುಡಿದರು.
ಇದಲ್ಲದೆ, "ಭಾರತ-ಪಾಕಿಸ್ತಾನಗಳು ಕಾಶ್ಮೀರ ಕುರಿತು ರಹಸ್ಯ ಮಾತುಕತೆ ಆರಂಭಿಸಿವೆ' ಎಂದೂ ಅಮೆರಿಕದ ನ್ಯೂಸ್ ವೀಕ್ ಪತ್ರಿಕೆಯು ಭಾರತ ಮತ್ತು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಡಿರುವ ವರದಿಯನ್ನೂ ಪ್ರಸ್ತಾಪಿಸಿದ ಆಡ್ವಾಣಿ, "ರಹಸ್ಯ ಮಾತುಕತೆಗಳು ನಡೆದಿದ್ದೇ ಆದಲ್ಲಿ, ಇದು ಗಂಭೀರ ಪರಿಣಾಮಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಪ್ರಧಾನಿಯವರು ಸಂಸತ್ತಿಗೆ ಸ್ಪಷ್ಟನೆ ನೀಡಬೇಕು" ಎಂದು ಆಡ್ವಾಣಿ ಒತ್ತಾಯಿಸಿದರು.
ಇದರಿಂದ ಕೆರಳಿದ ಪ್ರಧಾನಿ ಮನಮೋಹನ್ ಸಿಂಗ್, 'ಎನ್‌ಡಿಎ ವಿದೇಶಾಂಗ ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರು ಎಷ್ಟು ಬಾರಿ ಅಮೆರಿದೊಂದಿಗೆ ಮಾತುಕತೆ ನಡೆಸಿಲ್ಲ? ಈ ಮಾತುಕತೆಗಳ ಬಗ್ಗೆ ಪ್ರತಿ ಬಾರಿಯೂ ಸಂಸತ್ತಿಗೆ ತಿಳಿಸಲಾಗಿತ್ತೇ?' ಎಂದು ಮರುಪ್ರಶ್ನಿಸಿದರು.
ಒಬಾಮ ಈಗಾಗಲೇ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದೂ ಪ್ರಧಾನಿ ನುಡಿದರು.
ಮತ್ತೊಂದು ಬಾರಿ, ರಕ್ಷಣಾ ಸಿಬ್ಬಂದಿಗೆ ಒಂದು 'ರ‌್ಯಾಂಕ್-ಒಂದು ಪೆನ್ಶನ್' ಯೋಜನೆ ಅನುಷ್ಠಾನ ವಿಷಯವೂ ವಾಗ್ಯುದ್ಧಕ್ಕೆ ಕಾರಣವಾಯಿತು. 2009ರ ಬಜೆಟ್‌ನಲ್ಲಿ ಭರವಸೆ ನೀಡಿದಂತೆ, ಮಾಜಿ ಸೇನಾಧಿಕಾರಿಗಳಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿಲ್ಲ ಎಂದು ಆಡ್ವಾಣಿ ಆಕ್ಷೇಪವೆತ್ತಿದರು.
ಮತ್ತೆ ಕೆರಳಿದ ಪ್ರಧಾನಿ, ರಕ್ಷಣಾ ಸಿಬ್ಬಂದಿಗಳು ಮತ್ತು ಸರಕಾರದ ನಡುವೆ ಒಡಕು ಮೂಡಿಸಲು ಆಡ್ವಾಣಿ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. 'ನಾನು ಭರವಸೆ ನೀಡಿದ್ದನ್ನು ಸರಕಾರ ಪಾಲಿಸಿದೆ. ವಿತ್ತ ಸಚಿವರು ಬಜೆಟಿನಲ್ಲಿ ಏನು ಹೇಳಿದ್ದಾರೋ, ಅದನ್ನು ಅನುಷ್ಠಾನಗೊಳಿಸಲಾಗಿದೆ' ಎಂದು ಉತ್ತರಿಸಿದರು.