ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಿಳಾ ಸೇನಾಧಿಕಾರಿಗೆ ಮೊದಲ ಕೋರ್ಟ್ ಮಾರ್ಷಲ್, ಜೈಲಿಗೆ (Woman officer | court martial | corruption | Major Dimple Singla)
ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಮಹಿಳಾ ಸೇನಾಧಿಕಾರಿಯೊಬ್ಬರು ಕೋರ್ಟ್ ಮಾರ್ಷಲ್‌ಗೊಳಗಾಗಿದ್ದು, ಮೇಜರ್ ಡಿಂಪಲ್ ಕಪಾಡಿಯಾರಿಗೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದು ವರ್ಷದ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.
ಡಿಂಪಲ್ ಅವರ ಮೇಲಿದ್ದ ಭ್ರಷ್ಟಾಚಾರ, ಅಶಿಸ್ತು ಮತ್ತು ವೃತ್ತಿ ದ್ರೋಹ ಆರೋಪಗಳು ಕೋರ್ಟ್ ಮಾರ್ಷಲ್‌ನಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ಘೋಷಿಸಲಾಗಿದೆ. ಅಲ್ಲದೆ ಅವರಿಗೆ ನೀಡಲಾಗಿರುವ ಪ್ರಶಸ್ತಿಗಳು, ಪದಕಗಳು ಮತ್ತು ಗೌರವಗಳನ್ನು ಹಿಂದಕ್ಕೆ ಪಡೆಯುವಂತೆ ಆದೇಶ ನೀಡಲಾಗಿದೆ.
ಪಂಜಾಬ್‌ನ ಜಿರಾಕ್ಪುರ್‌ನಲ್ಲಿನ ಸೇನಾ ಶಿಬಿರದ ಕೆ ಏರಿಯಾ ಎಂಬಲ್ಲಿನ ಕರ್ನಲ್ ಸಂಜೀವ್ ಜೋಸ್ ಮುಖ್ಯಸ್ಥರಾಗಿರುವ ಜನರಲ್ ಕೋರ್ಟ್ ಮಾರ್ಷಲ್ ಬುಧವಾರ ತಡರಾತ್ರಿ ಈ ತೀರ್ಪನ್ನು ನೀಡಿದೆ. ಇದರೊಂದಿಗೆ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಕೋರ್ಟ್ ಮಾರ್ಷಲ್‌ಗೆ ಒಳಗಾದ ಪ್ರಕರಣವೆಂಬ ಕೆಟ್ಟ ದಾಖಲೆ ನಿರ್ಮಾಣವಾಗಿದೆ.
ಡಿಂಪಲ್ ಅವರು ಸೇನೆಯ ಜಡ್ಜ್ ಅಡ್ವೊಕೇಟ್ ಜನರಲ್ ಶಾಖೆಯಲ್ಲಿ ಅಧಿಕಾರಿಯಾಗಿದ್ದು, 1997ರ ಮಾರ್ಚ್ ತಿಂಗಳಲ್ಲಿ ಭಾರತೀಯ ಸೇನೆಯ ಜಡ್ಜ್ ಅಡ್ವೊಕೇಟ್ ಜನರಲ್ ಶಾಖೆಯಲ್ಲಿದ್ದಾಗ ಕಮಿಷನ್ ಪಡೆದಿದ್ದರು. ಪ್ರಕರಣದ ಸಂಬಂಧ 2007ರ ಏಪ್ರಿಲ್ ತಿಂಗಳಲ್ಲಿ ಅವರ ವಿಚಾರಣೆ ಆರಂಭಿಸಲಾಗಿತ್ತು. ಹಲವಾರು ಕಾರಣಗಳನ್ನು ಮುಂದಿಟ್ಟಿದ್ದ ನ್ಯಾಯಾಲಯ ವಿಚಾರಣೆಯನ್ನು ಹಲವು ಬಾರಿ ಮುಂದೂಡಿತ್ತು.
ಅವರು ವಕೀಲ ಹಾಗೂ ಆರೋಪಿ ಸೇನಾಧಿಕಾರಿಯ ಸಲಹೆಗಾರರಿಂದ 10,000 ರೂಪಾಯಿ ಲಂಚ ಪಡೆದಿದ್ದರು ಎಂಬ ಆರೋಪ ಹೊರಿಸಲಾಗಿತ್ತು. ಅಲ್ಲದೆ ಆಕೆ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಮತ್ತು ವಿಚಾರಣೆಗಳ ಸಂದರ್ಭಗಳಲ್ಲಿ ತನ್ನ ಪರವಾಗಿ ತೀರ್ಪು ನೀಡುವಂತೆ ಒತ್ತಡವನ್ನು ಹೇರಿದ್ದು ಕೂಡ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಇದನ್ನೂ ಶಿಕ್ಷೆ ಪ್ರಕಟಿಸುವಾಗ ಗಮನಕ್ಕೆ ತೆಗೆದುಕೊಳ್ಳಲಾಗಿದೆ.
ಕಳೆದ ವರ್ಷದ ಡಿಸೆಂಬರ್ 28ರಂದು ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಆರಂಭವಾಗುವಾಗ ಆರೋಗ್ಯ ಸಮಸ್ಯೆಯನ್ನು ಮುಂದೊಡ್ಡಿದ್ದ ಡಿಂಪಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮರುದಿನವೇ ಆಸ್ಪತ್ರೆಯಿಂದ ಅನಧಿಕೃತವಾಗಿ ಬಿಡುಗಡೆ ಹೊಂದಿದ್ದ ಡಿಂಪಲ್, ತನ್ನ ವಿರುದ್ಧ ಜಾರಿಯಾಗಿದ್ದ ಬಂಧನ ವಾರೆಂಟ್ ಕುರಿತು ಕೂಡ ಯಾರಿಗೂ ಮಾಹಿತಿ ನೀಡಿರಲಿಲ್ಲ.
ಅವರ ಮನೆಯ ಮೇಲೆ ಸೇನಾಧಿಕಾರಿಗಳು ದಾಳಿ ನಡೆಸಿದ್ದರಾದರೂ ಪತ್ತೆಯಾಗಿರಲಿಲ್ಲ. ಬಳಿಕ ಡಿಂಪಲ್ ಚಂಡೀಗಢದ ಸಶಸ್ತ್ರ ಪಡೆಗಳ ನ್ಯಾಯಾಧಿಕರಣ ಪೀಠಕ್ಕೆ ಮೊರೆ ಹೋಗಿ, ಬಂಧಿಸದಂತೆ ಆದೇಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಇದನ್ನು ತಿರಸ್ಕರಿಸಿದ್ದ ನ್ಯಾಯಾಧಿಕರಣ, ಕೋರ್ಟ್ ಮಾರ್ಷಲ್ ಎದುರು ಫೆಬ್ರವರಿ 1ರ ಮೊದಲು ಹಾಜರಾಗುವಂತೆ ಆದೇಶ ನೀಡಿತ್ತು.
ಬಳಿಕ ಡಿಂಪಲ್ ಅವರನ್ನು ಫೆಬ್ರವರಿ 1ರಂದು ಸೇನಾ ನ್ಯಾಯಾಲಯವು ಬಂಧನಕ್ಕೊಳಪಡಿಸಿ, ಫೆಬ್ರವರಿ 9ರಂದು ಜಾಮೀನು ನೀಡಿತ್ತು.