ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೆಟ್ರೋಲ್ ದರಯೇರಿಕೆ; ಸರಕಾರಕ್ಕೆ ಸೋನಿಯಾ ಬೆಂಬಲ
(Sonia Gandhi | fuel price hike | UPA government | Pranab Mukherjee)
ಈ ಬಾರಿಯ ಕೇಂದ್ರ ಬಜೆಟನ್ನು ವಿತ್ತ ಸಚಿವ ಪ್ರಣಬ್ ಮುಖರ್ಜಿ ನಿಭಾಯಿಸಿರುವ ರೀತಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಶ್ಲಾಘಿಸಿದ್ದು, ಪೆಟ್ರೋಲಿಯಂ ಬೆಲೆಯೇರಿಕೆಯ ಸರಕಾರದ ನಿರ್ಧಾರಕ್ಕೆ ತನ್ನ ಸಂಪೂರ್ಣ ಬೆಂಬಲವಿದೆ ಎಂಬ ಪ್ರಬಲ ಸಂದೇಶವನ್ನು ರವಾನಿಸಿದ್ದಾರೆ.
ನಾವು ಹಲವು ಪ್ರಮುಖ ಸಾಮಾಜಿಕ ಭಾದ್ಯತೆಗಳನ್ನು ಹೊಂದಿದ್ದು, ಇವುಗಳನ್ನು ತಲುಪಲು ಸಂಪನ್ಮೂಲಗಳನ್ನು ಹೆಚ್ಚಳಗೊಳಿಸುವುದು ಅಗತ್ಯವಾಗಿದೆ. ವ್ಯಾಪಕ ಸ್ವಾಗತಕ್ಕೊಳಾಗಿರುವ ಒಂದು ಅತ್ಯುತ್ತಮ ಮತ್ತು ಸಮತೋಲನ ಹೊಂದಿರುವ ಬಜೆಟ್ ಮಂಡಿಸಿರುವ ಹಣಕಾಸು ಸಚಿವರನ್ನು ನಾನು ಅಭಿನಂದಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸೋನಿಯಾ ಹೇಳಿದರು.
ತನ್ನ ಭಾಷಣದ ಸಂದರ್ಭದಲ್ಲಿ ಸೋನಿಯಾರವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆ ಅಥವಾ ಇದನ್ನು ಹಿಂತೆಗೆದುಕೊಳ್ಳಲು ವಿರೋಧ ಪಕ್ಷಗಳು ಪಟ್ಟು ಹಿಡಿಯುತ್ತಿರುವ ವಿಚಾರ ಇವ್ಯಾವುದನ್ನೂ ಉಲ್ಲೇಖಿಸಲಿಲ್ಲ.
ಆದರೆ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ತಡೆಯುವುದು ನಮ್ಮ ಪ್ರಥಮ ಆದ್ಯತೆ ಎಂಬುದನ್ನು ಇದೇ ಸಂದರ್ಭದಲ್ಲಿ ಸೋನಿಯಾ ಪುನರುಚ್ಛರಿಸಿದ್ದಾರೆ.
ವಿರೋಧ ಪಕ್ಷಗಳ ಅಡ್ಡಿಪಡಿಸುವ ತಂತ್ರಗಳತ್ತ ದಾಳಿ ನಡೆಸಿರುವ ಸೋನಿಯಾ, ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿ ಪ್ರಜಾಪ್ರಭುತ್ವ ನೀತಿ ಮತ್ತು ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿದರು.
ನಿನ್ನೆ ವಿತ್ತ ಸಚಿವರು ಕಾಂಗ್ರೆಸ್ ಸಂಸದರಿಗೆ ಬಜೆಟ್ ಮುಖ್ಯಾಂಶಗಳ ಕುರಿತು ವಿವರಣೆ ನೀಡಿರುವುದನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಅಧಿನಾಯಕಿ, ಇದರಿಂದ ವಿರೋಧ ಪಕ್ಷಗಳ ತಂತ್ರವನ್ನು ವಿಫಲಗೊಳಿಸಲು ಅವರಿಗೆ ಸಹಕಾರವಾಗುತ್ತದೆ ಎಂದರು.
ಇದರೊಂದಿಗೆ ವ್ಯಾಪಕ ಟೀಕೆಗೊಳಗಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆ ನಿರ್ಧಾರಕ್ಕೆ ಸೋನಿಯಾ ಕೂಡ ಬೆಂಬಲ ನೀಡಿದಂತಾಗಿದ್ದು, ವಿರೋಧ ಪಕ್ಷಗಳು ಪ್ರತಿಭಟನೆ ತೀವ್ರಗೊಳಿಸುವ ನಿರೀಕ್ಷೆಗಳಿವೆ. ಇತ್ತೀಚೆಗಷ್ಟೇ ಸೋನಿಯಾ ನಿಲುವನ್ನು ಸ್ಪಷ್ಟಪಡಿಸುವಂತೆ ಬಿಜೆಪಿ ಆಗ್ರಹಿಸಿತ್ತು.