ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್ತಿಗೆ ಪ್ರಧಾನಿ ತಪ್ಪು ಮಾಹಿತಿ: ಅಡ್ವಾಣಿ ಗಂಭೀರ ಆರೋಪ
(parliamentary impropriety | Manmohan Singh | BJP | L K Advani)
ಸಂಸತ್ತಿಗೆ ಪ್ರಧಾನಿ ತಪ್ಪು ಮಾಹಿತಿ: ಅಡ್ವಾಣಿ ಗಂಭೀರ ಆರೋಪ
ನವದೆಹಲಿ, ಗುರುವಾರ, 4 ಮಾರ್ಚ್ 2010( 18:06 IST )
ಅಧ್ಯಕ್ಷೀಯ ಭಾಷಣದ ವಂದನಾ ನಿರ್ಣಯ ಚರ್ಚೆಯಲ್ಲಿ ಮನಮೋಹನ್ ಸಿಂಗ್ ಜತೆ ವಾಗ್ವಾದ ನಡೆಸಿದ್ದ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಮತ್ತೆ ದಾಳಿ ನಡೆಸಿದ್ದು, ಸೇನಾ ಸಿಬ್ಬಂದಿಯ ಪಿಂಚಣಿಯನ್ನು ಹೆಚ್ಚಿಸಲಾಗಿದೆ ಎಂದು ತಪ್ಪು ಮಾಹಿತಿ ನೀಡುವ ಮೂಲಕ ಪ್ರಧಾನಿಯವರು ಸಂಸದೀಯ ನಡವಳಿಕೆಯನ್ನು ಉಲ್ಲಂಘಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
'ಜೂನಿಯರ್ ಕಮೀಷನ್ಡ್ ಆಫೀಸರ್ಸ್ ಮತ್ತು ಜವಾನರ ನಿವೃತ್ತಿ ವೇತನವನ್ನು ಹೆಚ್ಚಳಗೊಳಿಸುವ ಸರಕಾರ ನಿರ್ಧಾರವನ್ನು ಜಾರಿಗೊಳಿಸಲಾಗಿದೆ ಎಂದು ಬುಧವಾರ ಲೋಕಸಭೆಯಲ್ಲಿ ಪ್ರಧಾನ ಮಂತ್ರಿಗಳು ಹೇಳಿದ್ದರು. ಆದರೆ ಯಾವುದೇ ಜೂನಿಯರ್ ಕಮೀಷನ್ಡ್ ಆಫೀಸರ್ಸ್ ಮತ್ತು ಜವಾನರು ಇಂತಹ ಆದೇಶವನ್ನು ಪಡೆದುಕೊಂಡಿಲ್ಲ. ಇದು ಸ್ಪಷ್ಟವಾಗಿ ಸಂಸದೀಯ ನಡವಳಿಕೆಯನ್ನು ಉಲ್ಲಂಘಿಸಿದ ಗಂಭೀರ ವಿಚಾರ ಎಂದು ಅಡ್ವಾಣಿಯವರು ಬಿಜೆಪಿ ಸಂಸದರಿಗೆ ತಿಳಿಸಿದ್ದಾರೆ' ಎಂದು ಅಡ್ವಾಣಿಯವರ ಹೇಳಿಕೆಯನ್ನು ಉಲ್ಲೇಖಿಸುತ್ತಾ ಪಕ್ಷದ ಹಿರಿಯ ನಾಯಕ ಎಂ. ವೆಂಕಯ್ಯ ನಾಯ್ಡು ಪತ್ರಕರ್ತರಿಗೆ ಹೇಳಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷರಾಗಿರುವ ಅಡ್ವಾಣಿಯವರು ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಾ, ನಿವೃತ್ತ ಮೇಜರ್ ಜನರಲ್ ಹಾಗೂ ಭಾರತೀಯ ನಿವೃತ್ತ ಯೋಧರ ಚಳವಳಿಯ ಉಪಾಧ್ಯಕ್ಷ ಸತ್ಬೀರ್ ಸಿಂಗ್ ಅವರ ಪತ್ರವನ್ನು ಉಲ್ಲೇಖಿಸಿ ವಿವರಣೆ ನೀಡಿದರು. ಸರಕಾರವು 2009ರ ಜುಲೈ 6ರಂದು ಆದೇಶ ನೀಡಿದೆ ಎಂದು ಹೇಳಿರುವುದು ಕೂಡ ಪತ್ರದಲ್ಲಿತ್ತು.
ನಿವೃತ್ತ ಸೇನಾ ಯೋಧರ ಪಿಂಚಣಿ ಹೆಚ್ಚಳ ಸೇರಿದಂತೆ ಹಲವು ವಿಚಾರಗಳ ಕುರಿತು ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುತ್ತಾ ಭಾಷಣ ಮಾಡುತ್ತಿದ್ದ ಅಡ್ವಾಣಿಯವರಿಗೆ ಬುಧವಾರ ಮನಮೋಹನ್ ಸಿಂಗ್ ಹಲವು ಬಾರಿ ನಡುವೆ ಬಾಯಿ ಹಾಕಿ ತಡೆ ಹಾಕಿದ್ದರು.
ಸಮಾನ ಶ್ರೇಣಿ ಸಮಾನ ವೇತನ ಎಂಬ ಮಾಜಿ ಸೇನಾ ಸಿಬ್ಬಂದಿಗಳ ಬೇಡಿಕೆಯನ್ನು ಉಲ್ಲೇಖಿಸುತ್ತಾ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಸಿಂಗ್ ಸ್ವಾತಂತ್ರ್ಯ ದಿನದಂದು ಮಾಡಿದ ಭಾಷಣವನ್ನೂ ಬುಧವಾರ ಅಡ್ವಾಣಿಯವರು ಬೆಟ್ಟು ಮಾಡಿ ತೋರಿಸಿದ್ದರು.
ಇದಕ್ಕೆ ಉತ್ತರಿಸಿದ್ದ ಪ್ರಧಾನಿ, ಸರಕಾರವು ಯಾವೆಲ್ಲಾ ಭರವಸೆಗಳನ್ನು ನೀಡಿದೆಯೋ ಅದನ್ನು ಜಾರಿಗೆ ತರಲಾಗಿದೆ; ಸರಕಾರ ಮತ್ತು ಸೇನೆಯ ನಡುವೆ ಗೊಂದಲ ಸೃಷ್ಟಿಸಬೇಡಿ ಎಂದು ಅಡ್ವಾಣಿ ಮೇಲೆ ಕಿಡಿ ಕಾರಿದ್ದರು.
ಈ ಬಗ್ಗೆ ಮಾತನಾಡಿದ ನಾಯ್ಡು, ಪ್ರಧಾನ ಮಂತ್ರಿಯವರು ವಿಚಾರದ ಬಗ್ಗೆ ಸರಿಯಾಗಿ ತಿಳಿದುಕೊಂಡ ನಂತರವಷ್ಟೇ ಮಾತನಾಡಬೇಕು. ಅವರ ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಅಡ್ವಾಣಿಯವರು ಹೇಳಿದ್ದಾರೆ ಎಂದರು.