ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉ.ಪ್ರ.ದಲ್ಲಿ 900, ಕರ್ನಾಟಕದಲ್ಲಿ 97 ಮಕ್ಕಳ ಅತ್ಯಾಚಾರ
(Uttar Pradesh | child rape cases | Ministry of Home Affairs | Karnataka)
2008ರಲ್ಲಿ ದೇಶಾದ್ಯಂತ ನಡೆದಿರುವ ಅಪ್ರಾಪ್ತರ ಅತ್ಯಾಚಾರ ಪ್ರಕರಣಗಳ ಅಂಕಿ-ಅಂಶಗಳನ್ನು ಕೇಂದ್ರ ಗೃಹ ಸಚಿವಾಲಯವು ಬಿಡುಗಡೆ ಮಾಡಿದ್ದು, 900 ಪ್ರಕರಣಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿರುವ ಉತ್ತರ ಪ್ರದೇಶ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಕೇಂದ್ರ ಬಿಡುಗಡೆ ಮಾಡಿರುವ ಮಕ್ಕಳ ಅತ್ಯಾಚಾರ ಪ್ರಕರಣದ ಪಟ್ಟಿಯಲ್ಲಿ ಕರ್ನಾಟಕ ಮೆಚ್ಚುಗೆ ಗಳಿಸುವ ಕೊನೆಯ ಸಾಲಿನಲ್ಲಿ ಗುರುತಿಸಿಕೊಂಡಿದ್ದು, ಕೇವಲ 97 ಪ್ರಕರಣಗಳಿಗಷ್ಟೇ 2008ರಲ್ಲಿ ಸಾಕ್ಷಿಯಾಗಿದ್ದನ್ನು ವರದಿ ತಿಳಿಸಿದೆ.
ಸಚಿವಾಲಯದ ಪ್ರಕಾರ ದೇಶದಾದ್ಯಂತ 2006ರಲ್ಲಿ 4,721 ಪ್ರಕರಣಗಳಷ್ಟೇ ದಾಖಲಾಗಿದ್ದವು. ಆದರೆ ಇದು 2007ರ ಅವಧಿಗಾಗುವಾಗ 5,045ಕ್ಕೇರಿತ್ತು. 2008ರಲ್ಲಿ ಆಘಾತ ಹುಟ್ಟಿಸುವ ರೀತಿಯಲ್ಲಿ 5,446 ಮಕ್ಕಳ ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ.
2006ರಲ್ಲಿ 5,489, 2007ರಲ್ಲಿ 5,756 ಹಾಗೂ 2008ರಲ್ಲಿ 6,363 ಮಂದಿ ಆರೋಪಿಗಳನ್ನು ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆಯಾ ರಾಜ್ಯಗಳ ಪೊಲೀಸರು ಬಂಧಿಸಿದ್ದಾರೆ.
ಉಳಿದ ರಾಜ್ಯಗಳತ್ತ ಗಮನ ಹರಿಸುವಾಗ 892 ಪ್ರಕರಣಗಳನ್ನು ಹೊಂದಿರುವ ಮಧ್ಯಪ್ರದೇಶ ಹಾಗೂ 690 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಮಹಾರಾಷ್ಟ್ರ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು 2008ರಲ್ಲಿ ಪಡೆದುಕೊಂಡಿವೆ.
ರಾಜಸ್ತಾನದಲ್ಲಿ 420, ಆಂಧ್ರಪ್ರದೇಶದಲ್ಲಿ 412, ಛತ್ತೀಸಗಢದಲ್ಲಿ 411, ದೆಹಲಿಯಲ್ಲಿ 301, ಕೇರಳದಲ್ಲಿ 215, ತಮಿಳುನಾಡಿನಲ್ಲಿ 187, ಪಶ್ಚಿಮ ಬಂಗಾಲದಲ್ಲಿ 129, ಪಂಜಾಬ್‌ನಲ್ಲಿ 106 ಹಾಗೂ ತ್ರಿಪುರಾದಲ್ಲಿ 104 ಪ್ರಕರಣಗಳು ದಾಖಲಾಗಿವೆ.
ಗುಜರಾತ್‌ನಲ್ಲಿ 99, ಕರ್ನಾಟಕದಲ್ಲಿ 97, ಬಿಹಾರದಲ್ಲಿ 91, ಹರ್ಯಾಣದಲ್ಲಿ 70, ಹಿಮಾಚಲ ಪ್ರದೇಶದಲ್ಲಿ 68, ಒರಿಸ್ಸಾದಲ್ಲಿ 65 ಹಾಗೂ ಗೋವಾದಲ್ಲಿ 18 ಪ್ರಕರಣಗಳು ನಡೆದಿವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.