ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏಳನೇ ತರಗತಿ ಹುಡುಗಿಯರಿಗೆ ಹೆಡ್‌ಮಾಸ್ಟರ್ ಗರ್ಭಾಧಾನ!
(Orissa school headmaster | raping students | Pradipta Sahu | Rapist teacher)
ಏಳು ಮತ್ತು ಎಂಟನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರನ್ನು ನಿರಂತರ ಅತ್ಯಾಚಾರ ನಡೆಸಿದ್ದ ಮುಖ್ಯೋಪಾಧ್ಯಾಯನೊಬ್ಬ ತನ್ನ ಇಬ್ಬರು ಸಹಚರರೊಂದಿಗೆ ಜೈಲು ಸೇರಿದ್ದಾನೆ. ಇಬ್ಬರು ಬಾಲಕಿಯರು ಗರ್ಭಿಣಿಯರಾದ ಸೂಚನೆಗಳು ಲಭಿಸಿದ ಬಳಿಕ ಪ್ರಕರಣ ಬಯಲಿಗೆ ಬಂದಿತ್ತು.
ಬುಡಕಟ್ಟು ಜನರ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡಗಳ ಮಕ್ಕಳಿಗೆಂದು ನಡೆಸಲ್ಪಡುವ ಒರಿಸ್ಸಾದ ನಬಾರಂಗಪುರ ಜಿಲ್ಲೆಯ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿರುವುದು. ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭವತಿಯರಾಗಿರುವುದನ್ನು ಮನಗಂಡ ಅದೇ ಶಾಲೆಯ ಮಹಿಳಾ ಶಿಕ್ಷಕಿ ದೂರು ನೀಡಿದ್ದರು.
ಭುವನೇಶ್ವರದಿಂದ ಸುಮಾರು 550 ಕಿಲೋ ಮೀಟರ್ ದೂರದಲ್ಲಿರುವ ಕೋಸಗುಂಡ ಬ್ಲಾಕ್‌ನಲ್ಲಿನ ಬೋಡಾ-ಅಮದಾ ಸೇವಾಶ್ರಮ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ತಾ ಸಾಹು ಏಳು ಮತ್ತು ಎಂಟನೇ ತರಗತಿಯ ನಾಲ್ವರು ಬಾಲಕಿಯರನ್ನು ತಿಂಗಳುಗಟ್ಟಲೆ ಅತ್ಯಾಚಾರ ನಡೆಸಿದ್ದ. ಈತನಿಗೆ ಸಹಾಯಕ ಶಿಕ್ಷಕ ಈಶ್ವರೀ ಭೋತ್ರಾ ಮತ್ತು ಅಡುಗೆ ಕೆಲಸದಾಳು ಪದ್ಮನ್ ಭೋತ್ರಾ ಸಹಕಾರ ನೀಡಿದ್ದರು.
ಮೂವರೂ ಆರೋಪಿಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದ್ದು, ಬಂಧಿಸಲಾಗಿದೆ. ಅವರ ವಿರುದ್ಧ ಇಲಾಖಾ ಕ್ರಮವನ್ನು ಈಗಾಗಲೇ ಆರಂಭಿಸಲಾಗಿದೆ. ಕೋಸಗುಂಡ ಬ್ಲಾಕ್ ಕಲ್ಯಾಣಾಧಿಕಾರಿಗೂ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ ಎಂದು ಇಲ್ಲಿನ ಜಿಲ್ಲಾಧಿಕಾರಿ ರೂಪಾ ಮಿಶ್ರಾ ತಿಳಿಸಿದ್ದಾರೆ.
ಈ ಕುರಿತ ಪೊಲೀಸ್ ತನಿಖೆಯ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿದ್ದೇನೆ. ಅತ್ಯಾಚಾರಕ್ಕೊಳಗಾದ ಏಳು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದ್ದಾರೆ.
ಘಟನೆ ಬಹಿರಂಗವಾಗುತ್ತಿದ್ದಂತೆ ವಿದ್ಯಾರ್ಥಿಗಳ ಹೆತ್ತವರು ಭಾರೀ ಸಂಖ್ಯೆಯಲ್ಲಿ ನೆರೆದು ಪ್ರತಿಭಟನೆ ನಡೆಸಿದ್ದಲ್ಲದೆ, ಲಂಪಟ ಗುರುವಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸುದ್ದಿ ಕಾವೇರುತ್ತಿದ್ದಂತೆ ರಾಜ್ಯ ಶಿಕ್ಷಣ ಸಚಿವ ಪ್ರತಾಪ್ ಜೇನಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.