ಕ್ಷಮೆ ಯಾಚಿಸಬೇಕು ಎಂಬ ಹಿಂದೂ ಸಂಘಟನೆಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿವಾದಿತ ಕಲಾವಿದ ಎಂ.ಎಫ್. ಹುಸೇನ್, ನಾನು ಯಾವ ಕಾರಣಕ್ಕಾಗಿ ಕ್ಷಮೆ ಕೇಳಬೇಕು; ನಾನು ನನಗೆ ಯಾವುದು ಸರಿ ಅನ್ನಿಸಿದೆಯೋ ಮತ್ತು ನನಗೆ ಯಾವುದು ಇಷ್ಟವಾಗಿತ್ತೋ ಅದನ್ನೇ ಮಾಡಿದ್ದೇನೆ. ಹಾಗಿದ್ದೂ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ವಿಷಾದವಿದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಕತಾರ್ ಪೌರತ್ವವನ್ನು ಸ್ವೀಕರಿಸಿರುವ ಭಾರತ ಮೂಲದ ಕಲಾವಿದನನ್ನು ಹಲವು ಪತ್ರಿಕೆ, ಟಿವಿ ವಾಹಿನಿಗಳು ಸಂದರ್ಶನ ನಡೆಸುತ್ತಿದ್ದು, ಅವುಗಳ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.
ಪ್ರಶ್ನೆ: ನಿಮಗೆ ಭಾರತದಲ್ಲಿ ಕಡಿಮೆ ಭದ್ರತೆ ನೀಡಲಾಯಿತು ಎಂಬುದು ಪೌರತ್ವ ತ್ಯಜಿಸಲು ಕಾರಣವೇ?
ಹುಸೇನ್: ಸೇಡು ತೀರಿಸಿಕೊಳ್ಳುವವರ ಎದುರು ಭದ್ರತೆಯೆನ್ನುವುದು ಯಾವ ಲೆಕ್ಕ? ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರಿಗೆ ಕಡಿಮೆ ಭದ್ರತೆ ನೀಡಲಾಗಿತ್ತೇ? ಯಾರಾದರೂ ಕೆಟ್ಟದ್ದನ್ನು ಮಾಡಲು ಬಯಸಿದರೆ, ಅದನ್ನು ಮಾಡಲು ಸಾಧ್ಯವಿದೆ.
ಪ್ರಶ್ನೆ: ನಿಮ್ಮ ಕೆಲವು ಕಲಾಕೃತಿಗಳ ವಿವಾದಗಳತ್ತ ಗಮನ ಹರಿಸುವುದಾದರೆ, ಶಿವಸೇನೆಯಂತಹ ಕೆಲವು ಸಂಘಟನೆಗಳು ನೀವು ಮೊದಲು ಕ್ಷಮೆ ಯಾಚಿಸಬೇಕು, ನಂತರ ಭಾರತಕ್ಕೆ ಬರಲಿ ಎಂದು ಹೇಳಿವೆ. ನೀವು ಮತ್ತೆ ವಿಷಾದ ವ್ಯಕ್ತಪಡಿಸುವಿರಾ?
ಹುಸೇನ್: ಯಾತಕ್ಕಾಗಿ ವಿಷಾದ? ನಾನೇನು ಮಾಡಿದ್ದೇನೋ, ಅದನ್ನು ಮನೋನಿಶ್ಚಯ ಮತ್ತು ಪ್ರೀತಿಯಿಂದ ಮಾಡಿದ್ದೇನೆ ಎಂದು ಹೇಳುತ್ತಾ ಬಂದಿದ್ದೇನೆ. ಆದರೆ ಈ ಪ್ರಕ್ರಿಯೆಯಲ್ಲಿ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ನಾನು ವಿಷಾದಿಸುತ್ತೇನೆ. ಆದರೆ ನನ್ನ ಆತ್ಮಸಾಕ್ಷಿ ನಿಷ್ಕಳಂಕವಾಗಿ, ಸ್ಪಷ್ಟವಾಗಿದೆ.
ಹುಸೇನ್: ಒಬ್ಬ ಕಲಾವಿದನಿಗೆ ಆತನ ದೃಷ್ಟಿಕೋನವೇ ಭಾಷೆ. ಅದರಂತೆ ನಾನು ವಿಶ್ವದ ಪ್ರಜೆ. ನೀವು ಚೀನಾದ ಒಬ್ಬ ಲೇಖಕನಾಗಿರಬೇಕಾದರೆ ನೀವು ಚೀನಾದಲ್ಲೇ ಇರಬೇಕಾಗುತ್ತದೆ. ಯಾಕೆಂದರೆ ಅಲ್ಲಿ ಚೀನೀ ಭಾಷೆ ಅಥವಾ ಇತರ ವಿಚಾರಗಳು ಇರುತ್ತವೆ. ದೃಶ್ಯಕಲೆ ಎನ್ನುವುದು ಮಾತ್ರ ಜಾಗತಿಕ ವಿಚಾರ.
ಪ್ರಶ್ನೆ: ನೀವು ಒಂದು ಕಡೆ ಕತಾರ್ ನಾನು ಕೇಳದೆ ಪೌರತ್ವ ನೀಡಿದೆ ಎನ್ನುತ್ತೀರಿ. ಮತ್ತೊಂದು ಕಡೆ ಭಾರತ ನನ್ನನ್ನು ತಿರಸ್ಕರಿಸಿದೆ ಎನ್ನುತ್ತೀರಿ. ನಿಜಕ್ಕೂ ಕತಾರ್ ಪೌರತ್ವ ಸ್ವೀಕರಿಸಲು ಕಾರಣವೇನು?
ಹುಸೇನ್: ಭಾರತವು ನನ್ನನ್ನು ತಿರಸ್ಕರಿಸಿದೆ ಎಂದು ನಾನು ಯಾವತ್ತೂ ಹೇಳಿಲ್ಲ. ಇಲ್ಲಿ ಅವಕಾಶ ಸಿಕ್ಕಿದೆ ಅದಕ್ಕಾಗಿ ಇಲ್ಲಿ ಬಂದಿದ್ದೇನೆ. ಪೌರತ್ವ ಅಂದ್ರೆ ಒಂದು ತುಂಡು ಪೇಪರ್, ಅಷ್ಟೇ. ಯಾರಾದರೂ ನನ್ನನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ಕರೆದಾಗ ಹೋಗದೆ ಅವರೊಂದಿಗೆ ಊಟ ಮಾಡಿದರೆ? ಇಲ್ಲ, ನನಗೆ ಮಾಂಸ ಬೇಡ, ಕೇವಲ ತರಕಾರಿ ಪದಾರ್ಥ ಮಾತ್ರ ಸಾಕು ಎಂದು ಹೇಳಬೇಕೇ?
ಪ್ರಶ್ನೆ: ನೀವು ನಿಮ್ಮ ಭಾರತೀಯ ಪಾಸ್‌ಪೋರ್ಟನ್ನು ಒಪ್ಪಿಸಿ ಕತಾರ್ ಪೌರತ್ವವನ್ನು ಸ್ವೀಕರಿಸಿದ್ದು ಯಾಕೆ? ಸಾಕಷ್ಟು ವರ್ಷಗಳಿಂದ ವಿದೇಶಗಳಲ್ಲೇ ನೆಲೆಸಿರುವ ನಿಮಗೆ ಭಾರತದ ಪೌರತ್ವವನ್ನು ತ್ಯಜಿಸುವ ಅಗತ್ಯವಾದರೂ ಏನಿತ್ತು?
ಹುಸೇನ್: ಮೊಹೆಂಜೆದಾರೋದಿಂದ ಮನಮೋಹನ್ ಸಿಂಗ್‌ವರೆಗಿನ ಭಾರತೀಯ ನಾಗರಿಕತೆಯ ಇತಿಹಾಸ, ಬ್ಯಾಬಿಲೋನಾ ನಾಗರಿಕತೆಯವರೆಗಿನ ಇತರ ನಾಗರಿಕತೆಗಳ ಇತಿಹಾಸ ಮತ್ತು ನನ್ನ ಹೃದಯಕ್ಕೆ ಅತಿ ಹತ್ತಿರವಾಗಿರುವ, ಮುಂದಿನ ವರ್ಷ 100 ವರ್ಷ ಪೂರೈಸಲಿರುವ ಭಾರತೀಯ ಸಿನಿಮಾದ 100 ವರ್ಷಗಳ ಇತಿಹಾಸ -- ಈ ಮೂರು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ನಿರ್ಧಾರವನ್ನು 2006ರಲ್ಲಿ ಮಾಡಿದ್ದೇ ಪ್ರಮುಖ ಕಾರಣ.
ಈ ಯೋಜಿತ ಕಾರ್ಯವನ್ನು ನಾನು ಭಾರತದಲ್ಲೇ ಮಾಡಲು ಬಯಸಿದ್ದೆ. ಆದರೆ ಅಲ್ಲಿ ಸಾಕಷ್ಟು ಅಡ್ಡಿಗಳಿರುವುದು ನಿಮಗೂ ಗೊತ್ತು, ಅಲ್ಲಿ ನಿರ್ವಿಘ್ನವಾಗಿ ಕೆಲಸ ಮಾಡಲಾಗದು. ಅಲ್ಲದೆ ಅಲ್ಲಿ ನನಗೆ ಪ್ರಾಯೋಜಕರನ್ನು ಹುಡುಕುವ ಪ್ರಶ್ನೆಯೂ ಇತ್ತು. ನನ್ನ ಕಲಾಕೃತಿಗಳಿಗೆ ಧನಸಹಾಯ ಮಾಡುವ ಪ್ರಾಯೋಜಕರು ನನಗೆ ಲಂಡನ್ ಮತ್ತು ಕತಾರ್‌ಗಳಲ್ಲಿ ಲಭ್ಯರಾದರು. ತೆರಿಗೆಗಳ ಕಾರಣದಿಂದ ನಾನು ಅನಿವಾಸಿ ಭಾರತೀಯನಾಗಬೇಕಾಗುವುದು ಈ ಹಂತದಲ್ಲಿ ನನಗೆ ಅನಿವಾರ್ಯವಾಯಿತು.