ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ಗಾಂಧಿ ನಿರ್ಧಾರವನ್ನು ವಿರೋಧಿಸಿದ ಪ್ರಧಾನಿ ಸಿಂಗ್! (Sonia Gandhi | Manmohan Singh | Congress | RTI)
Bookmark and Share Feedback Print
 
ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿಗೆ ಸಂಬಂಧಪಟ್ಟಂತೆ ಯುಪಿಎ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಮನವಿಯನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ತಳ್ಳಿ ಹಾಕಿದ್ದು, ಇಬ್ಬರ ನಡುವೆ ಒಡಕು ಸೃಷ್ಟಿಯಾಗಿದೆ ಎಂದು ವರದಿಗಳು ಹೇಳಿವೆ.

ಯುಪಿಎಯ ಎರಡನೇ ಆಡಳಿತಾವಧಿಯಲ್ಲೂ ಯಾವುದೇ ಸಮಸ್ಯೆಗಳಿಲ್ಲದೆ ಸೋನಿಯಾ ಮತ್ತು ಮನಮೋಹನ್ ನಡುವೆ ಅತ್ಯುತ್ತಮ ಬಾಂಧವ್ಯದೊಂದಿಗೆ ಸರಕಾರ ಮುಂದುವರಿಯುತ್ತಿರುವುದರ ನಡುವೆಯೇ ಇಬ್ಬರ ನಡುವೆ ಭಿನ್ನಮತ ಮೂಡಿರುವುದನ್ನು ಕಾಂಗ್ರೆಸ್ ಮೂಲಗಳೇ ಹೇಳುತ್ತಿವೆ.

ವರದಿಗಳ ಪ್ರಕಾರ ಸೋನಿಯಾ ಗಾಂಧಿಯವರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮನಮೋಹನ್ ಸಿಂಗ್ ಅವರು ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಕಚೇರಿಯನ್ನು ಮಾಹಿತಿ ಹಕ್ಕು ಕಾಯ್ದೆಯಿಂದ ಹೊರಗಿಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಲ್ಲಿ ತರಬೇಕೆಂದು ಉದ್ದೇಶಿಸಲಾಗಿರುವ ಪ್ರಧಾನ ಮಂತ್ರಿಯವರ ಪ್ರಸ್ತಾವಿತ ಬದಲಾವಣೆಗಳು ಜಾರಿಯಾದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗುಳಿಯುತ್ತದೆ.

ಇದೇ ಸಂಬಂಧ ಸೋನಿಯಾ ಗಾಂಧಿಯವರಿಗೆ ಸಿಂಗ್ ಪತ್ರವೊಂದನ್ನು ಬರೆದಿದ್ದಾರೆ ಎಂದು ಹೇಳಲಾಗಿದ್ದು, ನ್ಯಾಯಾಂಗಕ್ಕೆ ಸಂಬಂಧಪಟ್ಟ ಕೆಲವು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವುದು ಅಗತ್ಯವಿದೆ ಎಂದು ಹೇಳಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ಹೊರಗಿಡುವುದರಿಂದ ನ್ಯಾಯಾಧೀಶರುಗಳ ನೇಮಕಕ್ಕೆ ಸಂಬಂಧಪಟ್ಟ ಸುರಕ್ಷಿತವಾಗಿರಬೇಕಾದ ರಹಸ್ಯ ಮಾಹಿತಿಗಳು ಮತ್ತು ಪ್ರಮುಖ ಆಡಳಿತಾತ್ಮಕ ನಿರ್ಧಾರಗಳು ಬಹಿರಂಗವಾಗುವುದನ್ನು ತಪ್ಪಿಸಬಹುದು ಎಂದೂ ಸಿಂಗ್ ಪತ್ರದಲ್ಲಿ ಒತ್ತಿ ಹೇಳಿದ್ದಾರೆ.

ಇದಕ್ಕೂ ಮೊದಲು ಸೋನಿಯಾ ಗಾಂಧಿಯವರು ಕೂಡ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದರು. 'ಸರಕಾರೇತರ ಸಂಘಟನೆಗಳಂತೆ ನನ್ನ ನಿಲುವು ಕೂಡ ಸ್ಪಷ್ಟವಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಅಲ್ಲದೆ ಈಗಿರುವ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೆ ತರಬೇಕು' ಎಂದು ಸೋನಿಯಾ ಪತ್ರದಲ್ಲಿ ಒತ್ತಾಯಿಸಿದ್ದರು.

ಇದರೊಂದಿಗೆ ಸೋನಿಯಾ ಮತ್ತು ಪ್ರಧಾನಿ ನಡುವೆ ಅಭಿಪ್ರಾಯ ಭೇದ ಮೂಡಿರುವುದು ಸ್ಪಷ್ಟವಾಗಿದ್ದು, ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
ಸಂಬಂಧಿತ ಮಾಹಿತಿ ಹುಡುಕಿ