ಅನ್ನ ಸಂತರ್ಪಣೆಗೆ ನಾವು ಯಾರನ್ನೂ ಆಹ್ವಾನಿಸಿರಲಿಲ್ಲ. ಭಕ್ತರು ತಮ್ಮ ಸ್ವಂತ ಇಚ್ಛೆಯಿಂದಲೇ ಭಾರೀ ಸಂಖ್ಯೆಯಲ್ಲಿ ನನ್ನ ಆಶ್ರಮಕ್ಕೆ ಬಂದಿದ್ದರು. ಹಾಗಾಗಿ ಏನು ನಡೆದಿದೆಯೋ ಅದಕ್ಕೆ ಸ್ವತಃ ಅವರೇ ಜವಾಬ್ದಾರರು ಎಂದು ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ರಾಮ ಜಾನಕಿ ಮಂದಿರದಲ್ಲಿ ನಿನ್ನೆ ನಡೆದ ಕಾಲ್ತುಳಿತ ದುರಂತಕ್ಕೆ ಈ ಆಶ್ರಮದ ಕೃಪಾಳುಜೀ ಮಹಾರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಜನಪ್ರಿಯ ದೇವಮಾನವನಾಗಿರುವ ಮಹಾರಾಜ್ ಅವರ ಹೇಳಿಕೆಯನ್ನು ಬೇಜವಾಬ್ದಾರಿಯುತ ಎಂದು ಭಕ್ತರು ಟೀಕಿಸಿದ್ದಾರೆ. ಅವರ ಆಶ್ರಮದಲ್ಲಿ ನಡೆದ ದುರಂತಕ್ಕೆ ಭಕ್ತರನ್ನೇ ಹೊಣೆಗಾರರನ್ನಾಗಿ ಮಾಡುವ ಮೂಲಕ ಅವರು ಪ್ರಕರಣದಿಂದ ದೂರ ಉಳಿಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಾವು ಯಾರನ್ನೂ ಉಚಿತ ಊಟಕ್ಕಾಗಿ ಕರೆದಿರಲಿಲ್ಲ. ಭಕ್ತರು ಅವರ ಸ್ವಂತ ಇಚ್ಛೆಯಿಂದಲೇ ನನ್ನ ಆಶ್ರಮಕ್ಕೆ ಬಂದಿದ್ದರು. ಹಾಗಾಗಿ ನಡೆದಿರುವ ಘಟನೆಗೆ ಅವರೇ ಕಾರಣರು ಎಂದು ಮಹಾರಾಜ್ ತಿಳಿಸಿದ್ದಾರೆ.
ಆಶ್ರಮ ಆಯೋಜಿಸಿದ್ದ ಅನ್ನ ಸಂತರ್ಪಣೆಯು ಅವ್ಯವಸ್ಥೆಯಿಂದ ಕೂಡಿತ್ತು ಎಂಬ ಆರೋಪಗಳನ್ನು ಸ್ವೀಕರಿಸಲು ನಿರಾಕರಿಸಿರುವ ಅವರು, 'ಘಟನೆಯಲ್ಲಿ ಹೆಚ್ಚು ಮಕ್ಕಳೇ ಸಾವನ್ನಪ್ಪಿರುವುದು ಗಮನಾರ್ಹ. ಕಾಲ್ತುಳಿತದಲ್ಲಿ ವಯಸ್ಕರು ಕಡಿಮೆ ಬಲಿಯಾಗಿದ್ದಾರೆ' ಎಂದರು.
ಆಶ್ರಮದಲ್ಲಿನ ಪ್ರಧಾನ ದ್ವಾರ ಕುಸಿದ ಪರಿಣಾಮ ಭೀತಿಯಿಂದ ದಿಕ್ಕಾಪಾಲದ ಭಕ್ತರು ಕಾಲ್ತುಳಿತಕ್ಕೊಳಗಾಗಿದ್ದರು. ಇದರಿಂದಾಗಿ 26 ಮಕ್ಕಳು ಹಾಗೂ 37 ಮಹಿಳೆಯರು ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗದ ಆಶ್ರಮದ ಕಾರ್ಯಕರ್ತರು ಲಾಠಿ ಹಿಡಿದುಕೊಂಡು ಭಕ್ತರಿಗೆ ಹೊಡೆದಿದ್ದರು ಎಂದೂ ಆರೋಪಿಸಲಾಗಿದೆ.
ಆದರೆ ದುರ್ಘಟನೆಯ ಬಗ್ಗೆ ಆಶ್ರಮದ ಗುರು ಮತ್ತು ಅಲ್ಲಿನ ಸಿಬ್ಬಂದಿಗಳು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದು, ಜನರ ಸಾವಿಗೆ ದೇವರೇ ಕಾರಣ ಎಂದು ಆರೋಪಿಸಿ ಸುಮ್ಮನಾಗುತ್ತಾರೆ.
ಅಲ್ಲದೆ ಕಾಲ್ತುಳಿತಕ್ಕೆ ನಿಜವಾದ ಕಾರಣವೇನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಆರಂಭಿಕ ಮಾಹಿತಿಗಳ ಪ್ರಕಾರ ನಿರ್ಮಾಣ ಹಂತದಲ್ಲಿದ್ದ ಪ್ರಧಾನ ದ್ವಾರ ಕುಸಿತ ಕಂಡದ್ದರಿಂದ ಭಕ್ತಾದಿಗಳು ಭೀತಿಗೊಂಡು ಓಡಲು ಆರಂಭಿಸಿದ್ದರಿಂದ ಕಾಲ್ತುಳಿತ ನಡೆಯಿತು ಎಂದು ಹೇಳಲಾಗುತ್ತಿದೆ.
ಆದರೆ ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ ವಿದ್ಯುತ್ ಶಾಕ್‌ನಿಂದ ಹಲವರು ಮೃತರಾಗಿದ್ದಾರೆ ಎಂಬ ಗಾಳಿಸುದ್ದಿ ಪ್ರಧಾನ ದ್ವಾರದ ಬಳಿ ಸುಳಿದಾಡಿದ್ದೇ ಅವಘಢಕ್ಕೆ ಕಾರಣ.