ಉತ್ತರ ಪ್ರದೇಶ ಸರ್ಕಾರ ಸದ್ಯ ಅತ್ಯಂತ ಹೀನಾಯವಾದ ಆರ್ಥಿಕ ಕೊರತೆಯನ್ನು ಎದುರಿಸುತ್ತಿದ್ದು, ಪ್ರತಾಪಗಢದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಷ್ಟು ಶಕ್ತವಾಗಿಲ್ಲವಂತೆ!
ಹಾಗೆಂದು ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ. ಉತ್ತರಪ್ರದೇಶದ ಕೃಪಾಳುಜೀ ಮಹಾರಾಜ್ ಆಶ್ರಮದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಅದೇ ರಾಜ್ಯದ ಮುಖ್ಯಮಂತ್ರಿ ಮಾಯಾವತಿ, ತನ್ನ ಸರ್ಕಾರದ ಬಳಿ ಪರಿಹಾರ ನೀಡಲು ದುಡ್ಡೇ ಇಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ.
ಸದ್ಯಕ್ಕೆ ರಾಜ್ಯ ಆರ್ಥಿಕವಾಗಿ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅದ್ಕಕಾಗಿ ನಾನು ಈಗಾಗಲೇ ಕೇಂದ್ರದ ಮೊರೆ ಹೋಗಿದ್ದು, ಮೃತರಾದ ಹಾಗೂ ಗಾಯಾಳುಗಳ ಕುಟುಂಬಕ್ಕೆ ಪರಿಹಾರ ನೀಡಲು ಕೇಳಿಕೊಂಡಿದ್ದೇನೆ ಎಂದು ಮಾಯಾವತಿ ಹೇಳಿದ್ದಾರೆ.
ಹಾಗಿದ್ದರೂ ಕೇಂದ್ರ ಸರ್ಕಾರ ಪರಿಹಾರ ಪ್ರಕಟಿಸದಿದ್ದರೆ, ನಾವು ಬೇರೆ ಯೋಜನೆಗಳಿಗೆ ನೀಡುವ ಹಣದಲ್ಲಿ ಕೆಲವು ಭಾಗವನ್ನು ತೆಗೆದು ಜನರಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಮಾಯಾವತಿ ಹೇಳಿದ್ದಾರೆ.
ಕೇಂದ್ರ ವಿಕೋಪ ಪರಿಹಾರ ನಿಧಿಯಿಂದ ಇಂತಹ ಘಟನೆಗಳಿಗೆ ಹಣ ನೀಡಲಾಗುವುದಿಲ್ಲ ಎಂಬ ಮಾಹಿತಿಯೂ ಬಂದ ಹಿನ್ನೆಲೆಯಲ್ಲಿ, ಮಾಯಾವತಿ, ನಾನೀಗ ನನ್ನ ಪಕ್ಷದ ಎಲ್ಲ ಸಂಸದರಿಗೂ ಕೇಂದ್ರ ಸರ್ಕಾರಕ್ಕೆ ಈ ಘಟನೆಗೆ ಸಂಬಂಧಿಸಿದಂತೆ ಪರಿಹಾರ ನೀಡುವಂತೆ ಕೋರಿ ಪತ್ರ ಬರೆಯಲು, ಕರೆ ಮಾಡಲು ತಿಳಿಸಿದ್ದೇನೆ ಎಂದು ಅವರು ತಿಳಿಸಿದರು.
ಮೃತರಿಗೆ 2 ಲಕ್ಷ ಪರಿಹಾರ: ಆದರೆ ಮಾಯಾವತಿ ಸರ್ಕಾರ ಈ ಕೋರಿಕೆ ಸಲ್ಲಿಸಿದ ಬೆನ್ನಲ್ಲೇ ಪ್ರಧಾನಿ ಮನಮೋಹನ್ ಸಿಂಗ್ ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಕಾಲ್ತುಳಿತದಲ್ಲಿ ಮೃತರಾದ ಪ್ರತಿ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.