ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎರಡೂವರೆ ವರ್ಷದ ಮಗುವಿನ ಮೇಲೆ ವಿದ್ಯುತ್ ಕಳ್ಳತನ ಕೇಸು! (Kanpur | Toddler | power theft | Shahnawaz)
Bookmark and Share Feedback Print
 
ಸರಿಯಾಗಿ ತನ್ನ ಹೆಸರನ್ನೂ ಹೇಳಲು ಬಾರದ ಎರಡೂವರೆ ವರ್ಷದ ಹಸುಳೆ ವಿದ್ಯುತ್ ಕಳ್ಳತನ ಮಾಡಿದೆ ಎಂದು ದೂರು ದಾಖಲಿಸುವ ಮೂಲಕ ಉತ್ತರ ಪ್ರದೇಶದ ಕಾನ್ಪುರ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಗೆಪಾಟಲಿಗೀಡಾಗಿದೆ.

ಇಲ್ಲಿನ ವಿದ್ಯುತ್ ಸರಬರಾಜು ಕಂಪನಿಯು ಪುಟ್ಟ ಬಾಲಕ ಶಹ್ನಾವಾಜ್ ಮತ್ತು ಇತರ ಏಳು ಮಂದಿಯ ವಿರುದ್ಧ ಫೆಬ್ರವರಿ 3ರಂದು ಪ್ರಕರಣ ದಾಖಲಿಸಿದ ನಂತರ ಕಾನ್ಪುರ ಪೊಲೀಸರು ಆರೋಪಿಗಳನ್ನು ಬಂಧಿಸಲು ಅವರ ಮನೆಗೆ ದಾಳಿ ನಡೆಸಿದಾಗ ಈ ವಿಚಾರ ಬಯಲಿಗೆ ಬಂದಿತ್ತು.

ಇಲ್ಲಿನ ಬಜ್ರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಎಂಟು ಮಂದಿ ಆರೋಪಿಗಳನ್ನು ಬಂಧಿಸುವಂತೆ ಆದೇಶ ಪಡೆದ ಪೊಲೀಸರು ಹೋದಾಗ ಎಂಟನೇ ಆರೋಪಿ ಶಹ್ನಾವಾಜ್ ಎಂಬ ಬಾಲಕನನ್ನು ಅಜ್ಜಿ ತಂದು ಎದುರು ನಿಲ್ಲಿಸಿದಾಗ ಪೊಲೀಸರು ಸುಸ್ತೋಸುಸ್ತು!

ಇದರಿಂದ ಮುಜುಗರಕ್ಕೊಳಗಾದ ಪೊಲೀಸ್ ಸಿಬ್ಬಂದಿಗಳು ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ವಿದ್ಯುತ್ ನಿಗಮದ ಅಧಿಕಾರಿಗಳು ಪೋರನ ಮೇಲೆ ಕೇಸು ದಾಖಲಿಸಿದ್ದು ನಮ್ಮಿಂದಾಗಿರುವ ಪ್ರಮಾದ ಎಂಬುದನ್ನು ಪೊಲೀಸರಿಗೆ ತಿಳಿಸಿದ್ದಾರೆ. ವಾಸ್ತವವೆಂದರೆ ಈ ಬಾಲಕ ಮೂಲತಃ ರಾಯ್‌ಬರೇಲಿಯವನಾಗಿರುವುದು. ಅಜ್ಜಿ ಮನೆಗೆಂದು ಬಂದಿದ್ದವನ ಮೇಲೆ ವಿದ್ಯುತ್ ನಿಗಮವು ಪ್ರಕರಣ ದಾಖಲಿಸಿತ್ತು!

ವಿದ್ಯುತ್ ಕಳ್ಳತನ ಪ್ರಕರಣದಲ್ಲಿ ಯಾರೆಲ್ಲ ಪಾಲ್ಗೊಂಡಿದ್ದಾರೆ ಎಂದು ಸ್ಥಳೀಯರು ಸರಿಯಾದ ಮಾಹಿತಿ ನೀಡದ ಕಾರಣ ಇಂತಹ ಪ್ರಮಾದ ನಡೆದು ಹೋಗಿದೆ ಎಂದು ವಿದ್ಯುತ್ ಕಂಪನಿಯ ಮುಖ್ಯ ಇಂಜಿನಿಯರ್ ಕೇಶವರಾಮ್ ಪ್ರತಿಕ್ರಿಯೆ ನೀಡಿದ್ದಾರೆ.

ಅಜ್ಜಿ ಮನೆಗೆಂದು ಬಂದಿರುವ ಬಾಲಕನ ಹೆಸರನ್ನೇ ಹೊಂದಿರುವವರು ಆ ಕುಟುಂಬದಲ್ಲಿರಬಹುದು. ಏನಿದ್ದರೂ ಎಫ್ಐಆರ್‌ನಿಂದ ಮಗುವಿನ ಹೆಸರನ್ನು ಹಿಂದಕ್ಕೆ ಪಡೆಯುವಂತೆ ಪೊಲೀಸರಿಗೆ ನಾವು ಪತ್ರ ಬರೆದಿದ್ದೇವೆ ಎಂದು ಕೇಶವರಾಮ್ ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ತನಿಖೆ ನಡೆಸಲು ಇದೀಗ ಹಿರಿಯ ಇಂಜಿನಿಯರ್ ಎಸ್.ಕೆ. ರಾಸ್ತೋಗಿ ನೇತೃತ್ವದ ಸಮಿತಿಯೊಂದನ್ನು ರಚಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ