ಪುಣೆ ಜರ್ಮನ್ ಬೇಕರಿ ಸ್ಫೋಟ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡನ ಸಹಚರನೊಬ್ಬನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ಕಾಂಗ್ರೆಸ್ ಮುಖಂಡರು ತೀವ್ರ ಇರುಸುಮುರುಸಿಗೊಳಗಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಹಾಗೂ ವಿಧಾನ ಪರಿಷತ್ ಸದಸ್ಯ ಸಂಜಯ್ ದತ್ ಅವರ ಸಹಾಯಕ 54ರ ಹರೆಯದ ಆರಿಫ್ ಪಠಾಣ್ ಎನ್ನುವವರನ್ನು ಪೊಲೀಸರು ವಶದಲ್ಲಿಟ್ಟುಕೊಂಡಿದ್ದಾರೆ.
ಆದರೆ ಈ ಕುರಿತು ಪ್ರತಿಕ್ರಿಯೆ ಪಡೆಯಲೆಂದು ಈ ಭಾಗದ ಕಾಂಗ್ರೆಸ್ ನಾಯಕರ ಮೊಬೈಲ್‌ಗಳಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ. ತೀವ್ರ ಮುಜುಗರ ಎದುರಿಸುತ್ತಿರುವ ನಾಯಕರು, ಯಾವುದೇ ಹೇಳಿಕೆ ನೀಡಲು ಮುಂದಾಗುತ್ತಿಲ್ಲ ಎಂದು ವರದಿಗಳು ಹೇಳಿವೆ.
2008ರ ಜೈಪುರ ಸರಣಿ ಸ್ಫೋಟದಲ್ಲೂ ಪಠಾಣ್ ಅವರ ಹೆಸರು ಕೇಳಿ ಬಂದಿತ್ತು. ಪುಣೆ ಪ್ರಕರಣದಲ್ಲೂ ಅವರ ಕೈವಾಡವಿದೆ ಎಂಬ ಶಂಕೆಯಲ್ಲಿ ವಿಚಾರಣೆ ನಡೆಸಿರುವುದು ಹೌದು ಎಂದಿರುವ ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಈ ನಡುವೆ ಪಠಾಣ್ ಕಾಣೆಯಾಗಿದ್ದಾರೆ ಎಂದು ಅವರ ಕುಟುಂಬ ಮತ್ತು ಸ್ನೇಹಿತರು ದೂರಿಕೊಂಡಿದ್ದರು. ಅವರು ಇದ್ದಕ್ಕಿದ್ದಂತೆ ಕಾಣೆಯಾಗಿರುವ ಬಗ್ಗೆ ಪೊಲೀಸರು ವಿವರಣೆ ನೀಡಲು ನಿರಾಕರಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಮುಖ್ಯಸ್ಥ ಕೆ.ಪಿ. ರಘುವಂಶಿ ಪ್ರಕಾರ ಪಠಾಣ್ ಅವರನ್ನು ಅವರ ತಂಡ ವಿಚಾರಣೆಗೆಂದು ವಶಕ್ಕೆ ಪಡೆದಿಲ್ಲ. ಕೆಲವು ಮಾಹಿತಿಗಳನ್ನು ಪಡೆದಿರುವುದು ಹೌದು ಎಂದು ಹೇಳಿದ್ದಾರೆ.
ಪುಣೆ ಸ್ಫೋಟದ ಸಂಬಂಧ ಪಠಾಣ್ ಅವರನ್ನು ವಿಚಾರಣೆ ನಡೆಸಲಿದೆ ಎಂದು ತಾಯ್ಡೆ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ಕಲ್ಯಾಣದಲ್ಲಿನ ಬಜಾರ್‌ಪೇಟ್ ಪೊಲೀಸ್ ಠಾಣೆಗೆ ಅವರನ್ನು ಕರೆದುಕೊಂಡು ಹೋಗಿದ್ದರು. ಸಂಜೆಯವರೆಗೂ ಬಿಡುಗಡೆ ಮಾಡಿರಲಿಲ್ಲ. ನಂತರ ಅವರನ್ನು ಪುಣೆಗೆ ಕರೆದುಕೊಂಡು ಹೋಗಲಾಯಿತು. ಹೀಗೆ ಗೊತ್ತುಗುರಿಯಿಲ್ಲದೆ ಪೊಲೀಸರು ಪಠಾಣ್ ಅವರನ್ನು ವಶಕ್ಕೆ ತೆಗೆದುಕೊಂಡಿರುವುದು ಮತ್ತು ಮೂರು ದಿನಗಳಿಗೂ ಹೆಚ್ಚು ದಿನಗಳ ಕಾಲ ಬಿಡುಗಡೆ ಮಾಡದೇ ಇರುವುದು ತೀರಾ ಬೇಜವಾಬ್ದಾರಿತನ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೋತೆ ವಿವರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಠಾಣ್ ಪತ್ನಿ ಹಾಗೂ ಕಾಂಗ್ರೆಸ್‌ನಿಂದ ನಗರಪಾಲಿಕೆ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿದ್ದ ಚಾರುಲತಾ, 'ನನ್ನ ಗಂಡನನ್ನು ಅಕ್ರಮವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರಂಭದಲ್ಲಿ ವಿಚಾರಣೆ ನೆಪದಲ್ಲಿ ಬಂದು ಹೋಗುವಂತೆ ಹೇಳಲಾಗಿತ್ತು. ಬಳಿಕ ಅವರನ್ನು ಬಂಧಿಸದೆ ಪುಣೆಗೆ ಅಕ್ರಮವಾಗಿ ಕರೆದು ತೆಗೆದುಕೊಂಡು ಹೋಗಲಾಯಿತು' ಎಂದಿದ್ದಾರೆ.
ಈ ನಡುವೆ ಪಿಂಪ್ರಿ ಚಿಂಚವಾಡ್ ಎಂಬಲ್ಲಿನ ಜನವಾಡಿ ಪ್ರದೇಶದಿಂದ ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರನ್ನು ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ರಿಯಾಜ್ ಭಟ್ಕಳ್ ಸಹಚರರು ಎಂದು ಗುರುತಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.