ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಭವನದಲ್ಲಿರೋದು ಕಾಂಗ್ರೆಸ್ ಪಿಂಚಣಿದಾರರು: ಠಾಕ್ರೆ (Shiv Sena | Maharashtra Governor | Mumbai | Bal Thackeray)
Bookmark and Share Feedback Print
 
ಮುಂಬೈಯಲ್ಲಿ ಯಾರು ಬೇಕಾದರೂ ಬದುಕು ಸಾಗಿಸಬಹುದು ಎಂದು ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಾಯಣನ್ ಇತ್ತೀಚೆಗಷ್ಟೇ ನೀಡಿದ್ದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಶಿವಸೇನೆ, ಇದು ಮರಾಠಿಗರಿಗೆ ಬಗೆದಿರುವ ಅಪಚಾರ ಎಂದು ಬಣ್ಣಿಸಿದೆ.

ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಶನಿವಾರ ಬರೆದಿರುವ ಸಂಪಾದಕೀಯದಲ್ಲಿ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿರುವ ಪಕ್ಷದ ವರಿಷ್ಠ ಬಾಳ ಠಾಕ್ರೆ, 'ವಲಸೆಗಾರರು ಮುಂಬೈಗೆ ಬರುವುದನ್ನು ಮುಂದುವರಿಸಿ ಎಂದು ಹೇಳುವುದು ಮಹಾರಾಷ್ಟ್ರದ ಮೂಲವಾಸಿಗಳಿಗೆ ಬಗೆದ ದ್ರೋಹ' ಎಂದಿದ್ದಾರೆ.

ಶುಕ್ರವಾರ ಹೇಳಿಕೆ ನೀಡಿದ್ದ ರಾಜ್ಯಪಾಲರು, ಯಾರು ಬೇಕಾದರೂ ಮುಂಬೈಗೆ ಬಂದು ಜೀವನ ಸಾಗಿಸಬಹುದು; ಅವರಿಂದಷ್ಟೇ ಮುಂಬೈ ಪರಿಪೂರ್ಣವೆನಿಸಿಕೊಳ್ಳಲು ಸಾಧ್ಯ. ಶ್ರೀಮಂತರು, ಮಧ್ಯಮ ವರ್ಗ ಮತ್ತು ಬಡವರು ಇಲ್ಲಿ ಸಹಜೀವನ ನಡೆಸುತ್ತಾರೆ ಎಂದಿದ್ದರು.

ರಾಜ್ಯಪಾಲ ಹುದ್ದೆಯನ್ನು ಅಲಂಕರಿಸಿದ ನಂತರ ನಡೆಸಿದ ಮೊತ್ತ ಮೊದಲ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದ ಶಂಕರನಾರಾಯಣನ್, ನಗರದ ನಾಗರಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಬೇಕು; ದೇಶದ ಬೇರೆ ಭಾಗಗಳಿಂದ ನಗರಕ್ಕೆ ವಲಸೆ ಬರುವವರನ್ನು ತಡೆಯಲಾಗದು ಎಂದು ಹೇಳಿದ್ದರು.

ರಾಜಭವನದಲ್ಲಿರುವವರು ಕಾಂಗ್ರೆಸ್ ಪಿಂಚಣಿದಾರರು ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಠಾಕ್ರೆ, ರಾಜ್ಯಪಾಲರುಗಳು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ; ಅವರು ಜನಸಂಪರ್ಕವನ್ನೂ ಹೊಂದಿರುವುದಿಲ್ಲ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದಿದ್ದಾರೆ.

ಶಂಕರನಾರಾಯಣನ್ ಅವರು ಕರ್ನಾಟಕದ ರಾಜ್ಯಪಾಲರಾಗಿದ್ದರೆ, ಬೆಂಗಳೂರಿಗೆ ಯಾರು ಬೇಕಾದರೂ ಬರಬಹುದು ಎಂದು ಹೇಳುವ ಧೈರ್ಯ ಅವರಿಗಿರುತ್ತಿತ್ತೇ ಎಂದೂ ಠಾಕ್ರೆ ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

ಮುಂಬೈಯನ್ನು ಧರ್ಮಶಾಲೆಯನ್ನಾಗಿ ಮಾಡಲಾಗುತ್ತಿದೆ. ವಲಸೆಕೋರರ ಇಂತಹ ಒಳ ನುಸುಳುವಿಕೆಯನ್ನು ತಡೆಯಲು ಪರವಾನಗಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಠಾಕ್ರೆ ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ