ಎನ್ಆರ್ಐಗಳಿಗೆ ಹಿಂದೂ ವಿವಾಹ ಕಾಯ್ದೆ ಅನ್ವಯವಾಗಲ್ಲ: ಕೋರ್ಟ್
ಮುಂಬೈ, ಶನಿವಾರ, 6 ಮಾರ್ಚ್ 2010( 15:35 IST )
ಸಂಪ್ರದಾಯಬದ್ಧವಾಗಿ ಭಾರತದಲ್ಲಿಯೇ ಮದುವೆ ಮಾಡಿಕೊಳ್ಳಬೇಕೆಂಬುದು ಬಹುತೇಕ ಅನಿವಾಸಿ ಭಾರತೀಯರು ಬಯಸುತ್ತಾರೆ. ಆದರೆ ವಿದೇಶಗಳಲ್ಲಿ ವಾಸಿಸುವ ಈ ಮಂದಿಗೆ ಹಿಂದೂ ವಿವಾಹ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ಭಾರತೀಯ ಮೂಲದ ಇಬ್ಬರು ಅಮೆರಿಕಾ ಪ್ರಜೆಗಳು ಭಾರತದಲ್ಲಿ ಮದುವೆ ಮಾಡಿಕೊಂಡ ಬಳಿಕ ಅಮೆರಿಕಾದ ನ್ಯಾಯಾಲಯವು ಅವರಿಗೆ ಡೈವೋರ್ಸ್ ನೀಡಿತ್ತು. ಇದನ್ನು ಭಾರತದ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ಕೋರ್ಟ್ ಈ ತೀರ್ಪನ್ನು ನೀಡಿದೆ.
ದಂಪತಿ ಭಾರತಕ್ಕೆ ರಜಾದಿನದಲ್ಲಿ ಬಂದು ಒಂದು ದಿನ ತಂಗಿದ್ದರೂ ಅವರ ವಿಚ್ಛೇದನ ಪ್ರಕರಣವನ್ನು ವಿಚಾರಣೆ ನಡೆಸುವುದು ಭಾರತದ ನ್ಯಾಯಾಲಯಗಳ ವ್ಯಾಪ್ತಿಗೆ ಬರುತ್ತದೆ ಎಂದು ಪುಣೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ರೋಶನ್ ದಾಲ್ವಿ ವಜಾ ಮಾಡಿದ್ದಾರೆ.
ಅಮೆರಿಕಾದ ನ್ಯಾಯಾಲಯವೊಂದರಿಂದ ವಿಚ್ಛೇದನ ಪಡೆದುಕೊಂಡಿದ್ದ ಮಿಚಿಗನ್ ಮೂಲದ ಸ್ಮಿತಾ ಮುಲೇ ಅವರು ಸಲ್ಲಿಸಿದ್ದ ಅರ್ಜಿಯೊಂದನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಅವರ ಪತಿ ಸುಹಾಸ್ ಮುಲೇ ಅವರು ಭಾರತಕ್ಕೆ ವಾಪಸ್ ಬಂದು ಪುಣೆ ನ್ಯಾಯಾಲಯದಲ್ಲಿ ಮತ್ತೊಂದು ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು.
ಸ್ವಂತ ವೈವಾಹಿಕ ಮನೆಯಲ್ಲಿ (ಭಾರತ) ದಂಪತಿ ಸುದೀರ್ಘ ಸಮಯ ಉಳಿದುಕೊಳ್ಳದೆ, ಅಮೆರಿಕಾದ ತಮ್ಮ ವೈವಾಹಿಕ ಮನೆಯಲ್ಲಿ ತಂಗಿರುವ ಹಿನ್ನೆಲೆಯಲ್ಲಿ ಸುಹಾಸ್ ಪ್ರಕರಣವು ಭಾರತದ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹಾಗಾಗಿ ಅವರಿಗೆ ಹಿಂದೂ ವಿವಾಹ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
2008ರ ಜನವರಿ ತಿಂಗಳಲ್ಲಿ ಪುಣೆಯ ಔಂದ್‌ನಲ್ಲಿನ ಹೆತ್ತವರ ಮನೆಯಲ್ಲಿ ಗಂಡ-ಹೆಂಡತಿ ಒಂದು ರಾತ್ರಿಯನ್ನು ಕಳೆದಿದ್ದೇವೆ ಎಂಬ ಸುಹಾಸ್ ವಾದವನ್ನು ಆಲಿಸಿದ್ದ ಪುಣೆ ನ್ಯಾಯಾಲಯವು, ಈ ಪ್ರಕರಣದ ವಿಚಾರಣೆ ತನ್ನ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿತ್ತು.
ಆದರೆ ಇದನ್ನು ತಳ್ಳಿ ಹಾಕಿರುವ ಹೈಕೋರ್ಟ್, ಈ ತೀರ್ಪಿನಲ್ಲಿ ಮಾಹಿತಿ ಕೊರತೆಯಿರುವುದರಿಂದ ಮಧ್ಯ ಪ್ರವೇಶಿಸುವುದು ಅಗತ್ಯವೆನಿಸಿತು ಎಂದು ಸುಹಾಸ್ ತಾನು ಭಾರತದಲ್ಲಿ ವಾಸಸ್ಥಾನ ಹೊಂದಿರುವ ಬಗ್ಗೆ ಹಲವಾರು ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಹೊರತಾಗಿಯೂ ಹೇಳಿದೆ.
ಸುಹಾಸ್ 2001ರಲ್ಲಿ ನೀಡಲಾದ ರೇಷನ್ ಕಾರ್ಡ್, 1999ರಲ್ಲಿ ಪಡೆದುಕೊಂಡಿದ್ದ ವಾಹನ ಚಾಲನಾ ಪರವಾನಗಿ, 1995ರಲ್ಲಿ ನೀಡಲಾಗಿದ್ದ ಮತದಾರರ ಚೀಟಿ ಮತ್ತು 2019ರವರೆಗೆ ವ್ಯಾಲಿಡಿಟಿ ಹೊಂದಿರುವ ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಯಾವ ದಾಖಲೆಗಳು ಕೂಡ ಸುಹಾಸ್ ಭಾರತದಲ್ಲಿ ಖಾಯಂ ಆಗಿ ವಾಸಿಸಬೇಕೆಂಬ ಉದ್ದೇಶವನ್ನು ಹೊಂದಿದ್ದಾರೆಂಬುದನ್ನು ತೋರಿಸುತ್ತಿಲ್ಲ. ಅವರು ಅಮೆರಿಕಾದಲ್ಲೇ ಉಳಿದುಕೊಳ್ಳಲು ಬಯಸಿರುವುದನ್ನು ಹಸಿರು ಕಾರ್ಡು ತೋರಿಸುತ್ತಿದೆ. 2009ರ ಜನವರಿಯಲ್ಲಿ ಅವರಿಗೆ ವಿಚ್ಛೇದನ ನೀಡಿದ್ದ ಅಮೆರಿಕಾದ ನ್ಯಾಯಾಲಯದಲ್ಲೇ ಸುಹಾಸ್ ತನ್ನ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ ಎಂದು ಕೋರ್ಟ್ ತಿಳಿಸಿದೆ.