ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಸ್ಲಾಂನತ್ತಲೂ ಸೃಜನಶೀಲತೆ ತೋರಲು ಹುಸೇನ್ ಸಿದ್ಧರೇ?: ಶ್ರೀ ಶ್ರೀ (M F Husain | Indian citizenship | Sri Sri Ravishankar | Hindu Gods)
Bookmark and Share Feedback Print
 
ವಿವಾದಿತ ಕಲಾವಿದ ಎಂ.ಎಫ್. ಹುಸೇನ್ ಭಾರತದ ರಾಷ್ಟ್ರೀಯತೆಯನ್ನು ತ್ಯಜಿಸಿರುವುದಕ್ಕೆ ಹುಯಿಲೆಬ್ಬಿಸುತ್ತಿರುವುದು ದುರದೃಷ್ಟಕರ ಎಂದು ಬಣ್ಣಿಸಿರುವ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್, ಈ ನೆಲದ ಆರಾಧ್ಯ ಮೂರ್ತಿಗಳನ್ನು ಅವಮಾನಕ್ಕೊಳಪಡಿಸುವುದನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.

ಎಂ.ಎಫ್. ಹುಸೇನ್ ಅವರು ಭಾರತದ ಪೌರತ್ವವನ್ನು ತ್ಯಜಿಸುವಾಗ ಇಷ್ಟೊಂದು ಕೂಗು ಏಳುತ್ತಿರುವುದು ದುರದೃಷ್ಟಕರ. ಭಾರತವು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ನೀತಿಯನ್ನು ಹೊಂದಿದೆಯೆಂಬ ಕಾರಣಕ್ಕೆ ಯಾರೊಬ್ಬರೂ ಈ ನೆಲದ ಮಹಾಪುರುಷರನ್ನು ನಿರ್ಲಜ್ಜ ರೀತಿಯಲ್ಲಿ ಅವಮಾನಕ್ಕೆ ಒಳಪಡಿಸುವುದನ್ನು ಯಾರಿಂದಲೂ ಸ್ವೀಕರಿಸಲಾಗದು ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಬ್ಬರ ಕ್ರಿಯಾಶೀಲತೆಯ ಹಿಂದೆ ಯಾವುದೋ ಉದ್ದೇಶವೊಂದು ಅಡಗಿದ್ದರೆ ಅದು ಪ್ರಶ್ನಾರ್ಹ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಎಂ.ಎಫ್. ಹುಸೇನ್ ಅವರು ಹಿಂದೂ ದೇವತೆಗಳ ಬಗ್ಗೆ ತೋರಿಸಿರುವ ಸೃಜನಶೀಲತೆ ಮತ್ತು ಮನೋಭಾವನೆಯನ್ನು ಇಸ್ಲಾಮ್‌ ಮಹಾಪುರುಷರ ಬಗೆಗೂ ಅನುಸರಿಸಲೂ ಸಿದ್ಧರಿದ್ದಾರೆಯೇ? ಹಾಗೆ ಮಾಡಿದಲ್ಲಿ ಅವರು ತನ್ನ ಕತಾರ್ ಪೌರತ್ವವನ್ನು ಉಳಿಸಿಕೊಳ್ಳಲು ಸಮರ್ಥರೇ ಎಂದು ರವಿಶಂಕರ್ ಪ್ರಶ್ನಿಸಿದ್ದಾರೆ.

ಸಲ್ಮಾನ್ ರಶ್ದೀ ಮತ್ತು ತಸ್ಲೀಮಾ ನಸ್ರೀನ್ ಅವರಿಗೆ ಒಂದು ನೀತಿ, ಇತ್ತ ಹುಸೇನ್ ಅವರಿಗೆ ಮತ್ತೊಂದು ನೀತಿ -- ಈ ಮಾನದಂಡದಲ್ಲಿನ ಭಿನ್ನತೆಯೇ ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಸರಕಾರ ಅನುಸರಿಸುತ್ತಿರುವ ನೀತಿಗಳ ಕುರಿತು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದೂ ದೇವತೆಗಳ ನಗ್ನ ಹಾಗೂ ವಿಕೃತ ಕಲಾಕೃತಿಗಳನ್ನು ಬಿಡಿಸಿದ ಆರೋಪ ಹೊತ್ತಿರುವ ಹುಸೇನ್ ಮೇಲೆ ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಹುಸೇನ್ ಕೆಲವು ವರ್ಷಗಳ ಹಿಂದೆಯೇ ದೇಶ ತೊರೆದಿದ್ದರು.

ಇತ್ತೀಚೆಗಷ್ಟೇ ಭಾರತದ ಪೌರತ್ವವನ್ನು ತ್ಯಜಿಸಿ ಕತಾರ್ ಪೌರತ್ವವನ್ನು ಸ್ವೀಕರಿಸಿದ್ದ ಹುಸೇನ್ ಮೇಲೆ ಭಾರತದ ಹಲವು ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಅನುಕಂಪದ ಸುರಿಮಳೆಯನ್ನೇ ಸುರಿಸಿದ್ದರು. ಇದನ್ನು ಪರೋಕ್ಷವಾಗಿ ವಿರೋಧಿಸಿರುವ ಶ್ರೀ ಶ್ರೀ ರವಿಶಂಕರ್, ಈ ನೆಲದ ಸಂಸ್ಕೃತಿಯನ್ನು ಕ್ರಿಯಾಶೀಲತೆ ಹೆಸರಿನಲ್ಲಿ ಹಾಳುಗೆಡಹುವುದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ