ಮೊದಲು ಉಗ್ರ ಶಿಬಿರಗಳನ್ನು ಮುಚ್ಚಿ: ಪಾಕಿಸ್ತಾನಕ್ಕೆ ಆಂಟನಿ
ತಿರುವನಂತಪುರಂ, ಶನಿವಾರ, 6 ಮಾರ್ಚ್ 2010( 19:05 IST )
ಉಭಯ ದೇಶಗಳ ನಡುವಿನ ಮಾತುಕತೆ ಮುಂದುವರಿಯಬೇಕಾದರೆ ಮೊದಲು 42 ಭಯೋತ್ಪಾದಕರ ಶಿಬಿರಗಳನ್ನು ಮುಚ್ಚಿ ಎಂದು ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ಎ.ಕೆ. ಆಂಟನಿ ಶನಿವಾರ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಹತ್ತಿರ ಕಾರ್ಯಾಚರಿಸುತ್ತಿರುವ ಭಯೋತ್ಪಾದನಾ ಶಿಬಿರಗಳನ್ನು ಮುಚ್ಚಲು ಯಾವುದೇ ಗಂಭೀರ ಪ್ರಯತ್ನಗಳನ್ನು ಪಾಕಿಸ್ತಾನ ಇದುವರೆಗೂ ಮಾಡಿಲ್ಲ. ಸಮಗ್ರ ದ್ವಿಪಕ್ಷೀಯ ಮಾತುಕತೆ ನಿರ್ಧಾರವನ್ನು ಪ್ರಜ್ಞಾವಂತಿಕೆಯಿಂದಷ್ಟೇ ತೆಗೆದುಕೊಳ್ಳಲಾಗುತ್ತದೆ ಎಂದು ತಿರುವನಂತಪುರ ಸಮೀಪದ ವಿಜಿಂಜಮ್ ಎಂಬಲ್ಲಿ ಕರಾವಳಿ ತಟ ರಕ್ಷಣಾ ಪಡೆಯ ನೂತನ ಕಚೇರಿ ಮಳಿಗೆಯನ್ನು ಉದ್ಘಾಟಿಸಿದ ನಂತರ ಆಂಟನಿ ತಿಳಿಸಿದರು.
ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ ಯಶಸ್ಸು ಕಂಡು ಬಂದಿಲ್ಲ. ಮಾತುಕತೆ ಸಂಬಂಧ ಜಾಗರೂಕತೆಯ ನಿರ್ಧಾರ ಪ್ರಕ್ರಿಯೆ ಮುಂದುವರಿಯುತ್ತದೆ ಎಂದರು.
ಜಮ್ಮು-ಕಾಶ್ಮೀರ ಸರಕಾರ ಮತ್ತು ಕೇಂದ್ರ ಗೃಹ ಸಚಿವಾಲಯವು ಒಳನುಸುಳುವಿಕೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಭಯೋತ್ಪಾದಕರನ್ನು ಸಾಮಾನ್ಯ ಜೀವನಕ್ಕೆ ಮರಳಿಸಲು ಸಹಕರಿಸುವ ಯತ್ನಗಳನ್ನೂ ನಡೆಸುತ್ತಿದೆ ಎಂದೂ ಸಚಿವರು ಹೇಳಿದ್ದಾರೆ.
ಈಗಾಗಲೇ ಹಲವರು ಶರಣಾಗತರಾಗಿದ್ದಾರೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಭಯೋತ್ಪಾದಕರು ಒಳನುಸುಳುವಿಕೆಗೆ ಯತ್ನಿಸುತ್ತಿದ್ದಾರೆ, ಆದರೆ ನಮ್ಮ ಪಡೆಗಳು ಎಚ್ಚರಿಕೆಯಿಂದ ಗಡಿಯನ್ನು ಕಾಯುತ್ತಿವೆ ಎಂದು ಆಂಟನಿ ವಿವರಣೆ ನೀಡಿದ್ದಾರೆ.
ಅಮೆರಿಕಾವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ಅಫಘಾನಿಸ್ತಾನ-ಪಾಕಿಸ್ತಾನದ ಭಯೋತ್ಪಾದಕರ ಮೇಲೆ ಮಾತ್ರ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಬಳಸುವುದನ್ನು ವಾಷಿಂಗ್ಟನ್ ಖಚಿತಪಡಿಸಿಕೊಳ್ಳಬೇಕು. ಭಾರತದ ವಿರುದ್ಧ ಅವುಗಳನ್ನು ಬಳಸುವಂತಾಗಬಾರದು ಎಂದರು.