ನಕ್ಸಲೀಯರಿಂದ ಆಂತರಿಕ ಭದ್ರತೆಗೆ ಧಕ್ಕೆ ಎಂದು ಹೇಳುತ್ತಲೇ ಬಂದಿದ್ದ ಕೇಂದ್ರ ಸರ್ಕಾರ ಇದೀಗ ಆಘಾತಕಾರಿ ವಿಷಯವೊಂದನ್ನು ಬಹಿರಂಗಗೊಳಿಸಿದ್ದು, 2050ರ ವೇಳೆಗೆ ಕೇಂದ್ರ ಸರ್ಕಾರವನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಮಾವೋ ಉಗ್ರರು ಸಂಚು ರೂಪಿಸಿರುವುದಾಗಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ತಿಳಿಸಿದ್ದಾರೆ.
'ನಾವು 2050ರೊಳಗೆ ಭಾರತ ಸರ್ಕಾರವನ್ನು ನಮ್ಮ ವಶಕ್ಕೆ ತೆಗೆದುಕೊಳ್ಳುವುದಾಗಿ ನಕ್ಸಲ್ ಮುಖಂಡ ಕೋಟೇಶ್ವರ ರಾವ್ ಅಲಿಯಾಸ್ ಕಿಶನ್‌ಜೀ ರಹಸ್ಯ ಸ್ಥಳದಿಂದ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸುವ ಮೂಲಕ ಸುದ್ದಿಯನ್ನು ಖಚಿತಪಡಿಸಿದ್ದಾನೆ. ನಾವು ನಮ್ಮದೇ ಆರ್ಮಿ ಪಡೆಯ ನೆರವಿನೊಂದಿಗೆ ಭಾರತೀಯ ರಾಜ್ಯಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದ್ದಾನೆ.
ಈ ನಿಟ್ಟಿನಲ್ಲಿ ತಮ್ಮ ಕಾರ್ಯಾಚರಣೆಯಲ್ಲಿ ನಿವೃತ್ತ ಸೇನಾಧಿಕಾರಿಗಳ ಪಾಲ್ಗೊಳ್ಳುವಿಕೆಯನ್ನು ಅಲ್ಲಗಳೆದ ಕಿಶನ್‌ಜೀ, ಯೋಜನೆಗೆ ಸಂಬಂಧಿಸಿದಂತೆ ಮಾವೋವಾದಿಗಳಿಗೆ ಯಾವುದೇ ಸೇನಾಧಿಕಾರಿಗಳ ನೆರವು ಅಥವಾ ಸಹಾಯದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ನಾವು ಯಾವುದೇ ಸೇನಾಧಿಕಾರಿಯ ಬೆಂಬಲ ಬಯಸುವುದಿಲ್ಲ ಎಂದಿರುವ ಆತ, ಕಳೆದ 30ವರ್ಷಗಳಿಂದ ಹೋರಾಡುತ್ತ ಬಂದಿರುವ ಮಾವೋವಾದಿಗಳಿಗೆ ಯಾವುದೇ ಸೇನಾಧಿಕಾರಿಗಿಂತಲೂ ಮಿಗಿಲಾದ ಯುದ್ದೋಪಾಯಗಳು ಕರಗತವಾಗಿವೆ ಎಂದಿದ್ದಾನೆ.
ಇದೀಗ 72ದಿನಗಳ ಶಾಂತಿ ಘೋಷಿಸಿದ್ದು, ಇದು ಕೇಂದ್ರ ಸರ್ಕಾರಕ್ಕೆ ಶಾಂತಿ ಮಾತುಕತೆಗೆ ಮುಂದಾಗಲು ಸಹಕಾರಿಯಾಗಿದೆ ಎಂದು ಈ ಸಂದರ್ಭದಲ್ಲಿ ಕಿಶನ್ ಜೀ ಹೇಳಿದ್ದಾನೆ.
ಏತನ್ಮಧ್ಯೆ, 8ರಾಜ್ಯಗಳ 34ಜಿಲ್ಲೆಗಳಲ್ಲಿ ಸದ್ಯ ನಕ್ಸಲೀಯರ ಪ್ರಭಾವ ಇರುವುದಾಗಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ವಿವರಿಸಿದ್ದು, ಮಾವೋವಾದಿಗಳಿಗೆ ಸರ್ಕಾರದ ಜೊತೆ ಮಾತುಕತೆ ನಡೆಸುವ ಇಚ್ಛೆ ಅವರಿಗಿದ್ದರೆ ಹಿಂಸೆ ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ.