2008ರಲ್ಲಿ ಉತ್ತರ ಭಾರತೀಯರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾದ ನಂತರ ಎಂಎನ್‌ಎಸ್ ನಡೆಸಿದ ಗಲಭೆಗೆ ಸಂಬಂಧಿಸಿದಂತೆ ಸಂಘಟನೆಯ ವರಿಷ್ಠ ಠಾಕ್ರೆ ವಿರುದ್ಧ ಮಹಾರಾಷ್ಟ್ರದ ವಿವಿಧ ಕೋರ್ಟ್‌ಗಳಲ್ಲಿ ಸುಮಾರು 73ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2008ರಲ್ಲಿ ಉತ್ತರ ಭಾರತೀಯರಿಗೆ ಮಹಾರಾಷ್ಟ್ರದ ನೆಲದಲ್ಲಿ ಅವಕಾಶವಿಲ್ಲ ಎಂದು ಠಾಕ್ರೆ ಹೇಳಿಕೆ ನೀಡಿದ್ದ ಪರಿಣಾಮ ಸಾಕಷ್ಟು ದೊಂಬಿ ನಡೆದಿತ್ತು. ಈ ಘಟನೆ ನಂತರ ಠಾಕ್ರೆ ಬಂಧನವಾದ ಸಂದರ್ಭದಲ್ಲಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ಅದರ ಪರಿಣಾಮ ಎಂಎನ್‌ಎಸ್ ವರಿಷ್ಠ ಠಾಕ್ರೆ ವಿರುದ್ಧ 73ಕ್ರಿಮಿನಲ್ ಕೇಸುಗಳು ದಾಖಲಾಗಿದ್ದವು. ಅದರಲ್ಲಿ ಆರು ಪ್ರಕರಣಗಳಿಗೆ ರಾಜ್ ಕೋರ್ಟ್‌ಗೆ ಹಾಜರಾಗಿ, ಜಾಮೀನು ಪಡೆದಿದ್ದರು.
ಇನ್ನುಳಿದ ಪ್ರಕರಣಗಳ ವಿಚಾರಣೆಗೆ ರಾಜ್ ಹಾಜರಾಗಿ, ಜಾಮೀನು ಪಡೆಯಬೇಕಾಗಿದೆ ಎಂದು ಪೊಲೀಸ್ ಮೂಲಗಳು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಅಲ್ಲದೇ ಜಲಗಾಂವ್ ಜಿಲ್ಲೆಯ ಭಾಡ್‌ಗನ್ ಮತ್ತು ಚೋಪ್ರಾ ನ್ಯಾಯಾಲಯಕ್ಕೆ, ಔರಂಗಬಾದ್‌ನ ಗಂಗಾಪುರ ನ್ಯಾಯಾಲಯದಲ್ಲಿರುವ 4ಪ್ರಕರಣಗಳ ಕುರಿತಂತೆ ನ್ಯಾಯಾಲಯಕ್ಕೆ ಹಾಜರಾಗಿರುವುದಾಗಿ ತಿಳಿಸಿದ್ದಾರೆ.
ರಾಜ್ ಠಾಕ್ರೆ ಒಂದರಂತೆ ಎಲ್ಲಾ ಮೊಕದ್ದಮೆಗಳಲ್ಲಿಯೂ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಳ್ಳಬೇಕಾಗಿದೆ. ಅದರಂತೆ ಆರೋಪಪಟ್ಟಿಯಂತೆ ವಿಚಾರಣೆ ಎದುರಿಸಬೇಕಾಗುತ್ತದೆ. ಠಾಕ್ರೆಯ ಎಲ್ಲಾ ಪ್ರಕರಣದ ಬಗ್ಗೆ ಪ್ರಸಿದ್ಧ ವಕೀಲ ಸಯಾಜಿ ನಾಂಗ್ರೆ ವಾದಿ ಮಂಡಿಸುತ್ತಿದ್ದಾರೆ.
ಉತ್ತರ ಭಾರತೀಯರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಪರಿಣಾಮ 2008 ಅಕ್ಟೋಬರ್ 21ರಂದು ರಾಜ್ ಠಾಕ್ರೆಯನ್ನು ರತ್ನಗಿರಿಯಲ್ಲಿ ಬಂಧಿಸಲಾಗಿತ್ತು. ಠಾಕ್ರೆಯ ಬಂಧನವನ್ನು ವಿರೋಧಿಸಿ ಎಂಎನ್‌ಎಸ್ ಕಾರ್ಯಕರ್ತರು ಸಾಕಷ್ಟು ಲೂಟಿ, ಗಲಭೆ ನಡೆಸಿದ್ದರು.