ಮಹಿಳಾ ಮೀಸಲಾತಿ ಮಸೂದೆ ತುಂಬಾ ಅಪಾಯಕಾರಿಗಳಲ್ಲೊಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್, ಮಹಿಳಾ ಮೀಸಲಾತಿ ಮಸೂದೆ ಮುಸ್ಲಿಂ ಮತ್ತು ದಲಿತ ವಿರೋಧಿ ಸಂಚಿನದ್ದಾಗಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಹಿಂದೆ ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳಿಗೆ ಮುಸ್ಲಿಮರು, ಹಿಂದುಳಿದ ವರ್ಗ ಹಾಗೂ ದಲಿತರ ಪ್ರವೇಶಕ್ಕೆ ತಡೆಯೊಡ್ಡುವ ಸಂಚು ಅಡಗಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಗಂಭೀರವಾಗಿ ದೂರಿದರು.
ಸಮಾಜವಾದಿ ಪಕ್ಷ ನಿಜಕ್ಕೂ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧವ್ಯಕ್ತಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಸಿಂಗ್, ಆದರೆ ಪ್ರಸಕ್ತ ಮಸೂದೆಯಲ್ಲಿನ ಅಂಶಗಳ ಬಗ್ಗೆ ತಮ್ಮ ವಿರೋಧವಿದೆ ಎಂದರು. ಈ ಮಸೂದೆ ಜಾರಿ ಮಾಡುವ ಹಿಂದೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಮುಸ್ಲಿಮರು, ಹಿಂದುಳಿದ ವರ್ಗದವರು ಮತ್ತು ದಲಿತರು ಪ್ರವೇಶಿಸದಂತೆ ತಡೆಯುವ ವ್ಯವಸ್ಥಿತ ಸಂಚನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮಾಡಿರುವುದಾಗಿ ಆರೋಪಿಸಿದರು.
ಆ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದು ಆರೋಪವಲ್ಲ, ಸತ್ಯಸಂಗತಿಯನ್ನೇ ಹೇಳುತ್ತಿದ್ದೇನೆ. ಕಾಂಗ್ರೆಸ್ ಮತ್ತು ಬಿಜೆಪಿ ಯಾವಾಗಲೂ ಮುಸ್ಲಿಂ, ಹಿಂದುಳಿದ ಹಾಗೂ ದಲಿತ ವಿರೋಧಿಯಾಗಿಯೇ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕಾದ ಅಗತ್ಯವಿದೆ ಎಂದರು.
ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಹಾಗೂ ಹರಿಯಾಣ ಸೇರಿದಂತೆ ಹಲವು ರಾಜ್ಯಗಳಿಂದ ಒಬ್ಬನೇ ಒಬ್ಬ ಮುಸ್ಲಿಂ ಸಂಸದನಾಗಿ ಆಯ್ಕೆಯಾಗಲಾರ. ಯಾಕೆಂದರೆ ಮೀಸಲಾತಿ ಇಲ್ಲದೆಯೇ ಮುಸ್ಲಿಂ ಮಹಿಳೆಯರು ಆಯ್ಕೆಯಾಗುವುದಾದರು ಹೇಗೆ ಎಂದು ಪ್ರಶ್ನಿಸಿದರು.