ವಿಶ್ವ ಮಹಿಳಾ ದಿನಾಚರಣೆಯ ಶತಮಾನೋತ್ಸವದಂದೇ (ಮಾ.8)ಕೇಂದ್ರದ ಯುಪಿಎ ಸರ್ಕಾರ ಬಹು ವಿವಾದಿದ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಮೂಲಕ ಐತಿಹಾಸಿಕ ಮೈಲಿಗಲ್ಲೊಂದನ್ನು ಸ್ಥಾಪಿಸಲು ಮುಂದಾಗಿದೆ. ಆರ್‌ಜೆಡಿಯ ಲಾಲೂ ಪ್ರಸಾದ್, ಬಿಎಸ್ಪಿಯ ಮಾಯಾವತಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಡುವೆಯೇ ಮಹಿಳಾ ಮೀಸಲಾತಿ ಜಾರಿಗೆ ಜಯ ನಿರೀಕ್ಷಿತವಾಗಿದೆ.
ಇಂದು ರಾಜ್ಯ ಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಿದ್ದಾರೆ. ಆ ನಿಟ್ಟಿನಲ್ಲಿ ಸಂಸತ್‌ನ ಉಭಯ ಸದನಗಳಲ್ಲಿ ನಂಬರ್ ಗೇಮ್ ಮುಖ್ಯವಾಗಿದೆ. ಆ ನಿಟ್ಟಿನಲ್ಲಿಯೂ ಯುಪಿಎಗೆ ಬಹುತೇಕ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸುಮಾರು 13ವರ್ಷಗಳಿಂದ ಜಾರಿಯಾಗದೆ ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಮಸೂದೆ ಜಾರಿಯಾಗುವುದು ನಿಶ್ಚಿತವಾಗಿದೆ.
ಬಿಜೆಪಿ-ಎಡಪಕ್ಷ ಸಾಥ್: ಮಹಿಳಾ ಮೀಸಲಾತಿ ಮಸೂದೆಗೆ ಭಾರತೀಯ ಜನತಾ ಪಕ್ಷ ಹಾಗೂ ಎಡಪಕ್ಷಗಳು ಪೂರ್ಣ ಬೆಂಬಲ ಘೋಷಿಸಿವೆ. ಅಲ್ಲದೇ ಮೀಸಲಾತಿ ಪರ ಮತ ಚಲಾಯಿಸುವಂತೆ ಬಿಜೆಪಿ ಈಗಾಗಲೇ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.
ದೇವೇಗೌಡರ ಕಾಲದಲ್ಲಿ ಮಂಡನೆ: ಮಹಿಳೆಯರಿಗೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ನೀಡಬೇಕೆಂಬ ಮಹತ್ವದ ನಿರ್ಧಾರದೊಂದಿಗೆ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಕಾಲದಲ್ಲಿ 1996 ಸೆಪ್ಪೆಂಬರ್ 12ರಂದು ಮೊದಲ ಬಾರಿಗೆ ಸಂಸತ್‌ನ ಮುಂದೆ ಬಂದಿತ್ತು. ಆದರೆ ಆ ಸಂದರ್ಭದಲ್ಲಿಯೇ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪರಿಣಾಮ ಮಸೂದೆ ಜಾರಿಗೆ ಹಿನ್ನಡೆಯಾಗಿತ್ತು.
ಬಳಿಕ ಮತ್ತೆ 1998-99ರಲ್ಲಿ ವಾಜಪೇಯಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಒಮ್ಮತದ ಬೆಂಬಲ ಸಿಗದೆ ಉಳಿದಿತ್ತು. ಇದೀಗ 2010ರಲ್ಲಿ ಯುಪಿಎ ನೇತೃತ್ವದ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಮುಂದಾಗಿದೆ.
ಮಸೂದೆ ಮಂಡನೆಗೆ ನಂಬರ್ ಗೇಮ್ ಎಷ್ಟು?: 233 ಸದಸ್ಯ ಬಲ ಹೊಂದಿರುವ ರಾಜ್ಯ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ 155 ಸದಸ್ಯರು ಬೆಂಬಲ ಬೇಕಾಗಿದ್ದು, ಒಟ್ಟು 164ಸದಸ್ಯರು ಬೆಂಬಲ ಸೂಚಿಸಿದ್ದಾರೆ.
ಸಂಸತ್‌ನಲ್ಲಿನ ಬೆಂಬಲ: ಅದೇ ರೀತಿ 544 ಸದಸ್ಯ ಬಲ ಹೊಂದಿರುವ ಸಂಸತ್‌ನಲ್ಲಿಯೂ ಮಸೂದೆ ಪರವಾಗಿ 363ರ ಸಂಸದರು ಬೆಂಬಲ ಬೇಕಾಗಿದ್ದು, ಒಟ್ಟು 410 ಸಂಸದರು ಪೂರ್ಣ ಬೆಂಬಲ ಸೂಚಿಸಿದ್ದಾರೆ. ಉಭಯ ಸದನಗಳಲ್ಲಿ ಮಸೂದೆ ಮಂಡನೆಯಾಗಬೇಕಿದ್ದರೆ 2/3 ಬೆಂಬಲ ಅಗತ್ಯವಾಗಿದೆ. ಈಗಾಗಲೇ ಮಸೂದೆಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯಂದೇ ಮಹಿಳೆಯರಿಗೆ ಜಾಕ್ ಪಾಟ್ ಕೊಡುಗೆ ನೀಡಲು ಯುಪಿಎ ಸರ್ಕಾರ ನಿರ್ಧರಿಸಿದೆ.