ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರು ಕೂಡ ಕನಸು ಕಾಣಬಹುದಾಗಿದೆ: ಕೇಂದ್ರ ಲೇವಡಿ (Indian state | Maoist leader | GK Pillai | Koteswar Rao)
Bookmark and Share Feedback Print
 
ಭಾರತ ಸರಕಾರವನ್ನು ಉರುಳಿಸುವ ನಕ್ಸಲರ ಕನಸು ಕನಸಾಗಿಯೇ ಉಳಿಯಲಿದೆ, ಅವರು ಕನಸು ಕಾಣಲು ಸ್ವತಂತ್ರರಾಗಿದ್ದಾರೆ ಎಂದು ಲೇವಡಿ ಮಾಡಿರುವ ಕೇಂದ್ರ ಸರಕಾರ, ಹಿಂಸಾಚಾರವನ್ನು ಸ್ಥಗಿತಗೊಳಿಸಿದ ಬಳಿಕವಷ್ಟೇ ಮಾತುಕತೆ ಸಾಧ್ಯ ಎಂಬುದನ್ನು ಪುನರುಚ್ಛರಿಸಿದೆ.

2050ರ ಹೊತ್ತಿಗೆ ಮಾವೋವಾದಿಗಳು ಭಾರತ ಸರಕಾರವನ್ನು ಉರುಳಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಈ ಹಿಂದೆ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದ ಮಾವೋವಾದಿ ನಾಯಕ ಕೋಟೇಶ್ವರ ರಾವ್ ಆಲಿಯಾಸ್ ಕಿಶನ್‌ಜೀ, ನಾವು 2050ರ ಮೊದಲೇ ಕೇಂದ್ರ ಸರಕಾರವನ್ನು ಕಿತ್ತೊಗೆಯಲಿದ್ದೇವೆ ಎಂದು ಹೇಳಿಕೆ ನೀಡಿದ್ದ.

ಅವರು ಕನಸು ಕಾಣಬಹುದು. ಪ್ರಜಾಪ್ರಭುತ್ವದಲ್ಲಿ ಕನಸು ಕಾಣುವ ಹಕ್ಕು ಅವರಿಗೂ ಇದೆ. ನಾವು ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಸಿಪಿಐಯಿಂದ (ಮಾವೋವಾದಿ) ಷರತ್ತುರಹಿತವಾದ ಹೇಳಿಕೆ ಹೊರಬರುತ್ತದೆ ಎಂಬುದನ್ನು ತಾನು ನಿರೀಕ್ಷಿಸುತ್ತಿದ್ದೇನೆ ಎಂದು ಗೃಹಸಚಿವರೂ ಹೇಳಿದ್ದಾರೆ. ಹಿಂಸಾಚಾರವನ್ನು ಸ್ಥಗಿತಗೊಳಿಸುವ ಷರತ್ತು ರಹಿತವಾದ ಹೇಳಿಕೆ ಅವರಿಂದ ಗೃಹ ಸಚಿವಾಲಯಕ್ಕೆ ಒಮ್ಮೆ ಬಂದರೆ ನಾವು ಮಾತುಕತೆಗೆ ಸಿದ್ಧರಾಗುತ್ತೇವೆ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಪಿಳ್ಳೈ ತಿಳಿಸಿದ್ದಾರೆ.

ವಿಚಾರಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಪಿಳ್ಳೈ, 'ಭಾರತ ಸರಕಾರವನ್ನು ಕಿತ್ತೊಗೆಯುವುದು ಅಂದರೆ ಅದು ನಾಳೆ ಅಥವಾ ನಾಡಿದ್ದು ನಡೆಯುತ್ತದೆ ಎನ್ನುವಂತಹ ಮಾತಲ್ಲ. ಅವರ ನೀತಿಯ ಪ್ರಕಾರ 2050 ಅಥವಾ ಕೆಲವು ದಾಖಲೆಗಳ ಪ್ರಕಾರ 2060ರೊಳಗೆ ಇದು ಸಾಧ್ಯವಾಗುತ್ತದೆ ಎಂದು ಅವರು ಹಂಚಿರುವ ಕೆಲವು ಪುಸ್ತಕಗಳಲ್ಲಿ ಹೇಳಿದ್ದಾರೆ' ಎಂದರು.

ಮಾವೋವಾದಿಗಳು ಈಗ ಕದನ ವಿರಾಮ ಮುಂದಿಟ್ಟಿರುವುದು ತಮ್ಮ ಪಡೆಗಳನ್ನು ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಪಿ. ಚಿದಂಬರಂ ಅವರಿಗೆ ಪ್ರತಿಕ್ರಿಯಿಸಿದ್ದ ಮಾವೋವಾದಿ ಮುಖಂಡ ಕಿಶನ್‌ಜೀ, ನಮ್ಮ ಪಡೆಗಳ ಕ್ರೋಢೀಕರಣಕ್ಕೆ ಸಮಯ ಬೇಕಾಗಿಲ್ಲ ಎಂದಿದ್ದ.

ಸೇನೆಯಲ್ಲಿನ ಮಾಜಿ ಅಧಿಕಾರಿಗಳು ಕೂಡ ಮಾವೋವಾದಿಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಮಾಹಿತಿಗಳೂ ನಮಗೆ ಬಂದಿವೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪಿಳ್ಳೈ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ