ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಮಾಜವಾದಿ, ಆರ್‌ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ (Rajya Sabha | Women's Reservation Bill | UPA Govt | Loka Sabha)
Bookmark and Share Feedback Print
 
ಮಹಿಳಾ ಮೀಸಲಾತಿ ಮಸೂದೆಯನ್ನು ಈಗ ಇರುವ ರೂಪದಲ್ಲಿ ಸ್ವೀಕರಿಸಲು ತೀವ್ರ ವಿರೋಧ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳಗಳು, ಕೇಂದ್ರದ ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿವೆ. ಇದರ ಬೆನ್ನಿಗೆ ಮಸೂದೆಯ ಮೇಲಿನ ಮತದಾನವನ್ನು ಸ್ಪೀಕರ್ ನಾಳೆಗೆ ಮುಂದೂಡಿದ್ದಾರೆ.

ಲೋಕಸಭಾ ಮತ್ತು ವಿಧಾನಸಭಾ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಬಳಿಕ ತೀವ್ರ ಗದ್ದಲ ಎಬ್ಬಿಸಿದ ಈ ಪಕ್ಷಗಳು, ಮಸೂದೆಯನ್ನು ಅಂಗೀಕರಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿವೆ. ಒಂದು ಹಂತದಲ್ಲಿ ಸಭಾಧ್ಯಕ್ಷರಿಗೆ ಮುತ್ತಿಗೆ ಹಾಕಿದ ಆಕ್ರೋಶಿತ ಸದಸ್ಯರು, ಮಸೂದೆಯ ಪ್ರತಿಗಳನ್ನೂ ಹರಿದು ಹಾಕಿದ್ದಾರೆ.

ಮಹಿಳಾ ಮೀಸಲಾತಿ ಕಾಯ್ದೆಯನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದು, ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಜಾರಿಗೊಳಿಸಲು ಯತ್ನಿಸುತ್ತಿದೆ; ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ. ಕಾಯ್ದೆಯನ್ನು ಈ ರೂಪದಲ್ಲಿ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ ಎಂದಿದ್ದಾರೆ.

ಯಾವುದೇ ಒತ್ತಡಕ್ಕೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬಗ್ಗದೇ ಇರುವುದನ್ನು ಮನಗಂಡಿರುವ ಸಮಾಜವಾದಿ ಮತ್ತು ರಾಷ್ಟ್ರೀಯ ಜನತಾದಳಗಳು, ಮಹಾ ಚುನಾವಣೆ ನಂತರ ಎದ್ದುಬಿದ್ದು ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳುವುದಾಗಿ ಹೇಳಿವೆ.

ಸರಕಾರಕ್ಕೆ ಧಕ್ಕೆಯಿಲ್ಲ...
ಲೋಕಸಭೆಯಲ್ಲಿ 22 ಸ್ಥಾನಗಳನ್ನು ಹೊಂದಿರುವ ಸಮಾಜವಾದಿ ಪಕ್ಷ ಮತ್ತು ನಾಲ್ಕು ಸ್ಥಾನಗಳನ್ನು ಹೊಂದಿರುವ ರಾಷ್ಟ್ರೀಯ ಜನತಾದಳಗಳು ಯುಪಿಎಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದರೂ ಸರಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ಕಾಂಗ್ರೆಸ್ (208), ತೃಣಮೂಲ ಕಾಂಗ್ರೆಸ್ (19), ಡಿಎಂಕೆ (18), ಎನ್‌ಸಿಪಿ (9), ನ್ಯಾಷನಲ್ ಕಾನ್ಫರೆನ್ಸ್ (3)ಗಳೊಂದಿಗೆ ಪ್ರಸಕ್ತ ಯುಪಿಎ ಮೈತ್ರಿಕೂಟವು 257 ಲೋಕಸಭಾ ಸದಸ್ಯರನ್ನು ಹೊಂದಿದೆ.

ಬಿಎಸ್‌ಪಿ (21), ಮುಸ್ಲಿಂ ಲೀಗ್ (2), ಜಾರ್ಖಂಡ್ ವಿಕಾಸ್ ಮೋರ್ಛಾ (1), ಜೆಡಿಎಸ್ (3)ಗಳು ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದು, ಯುಪಿಎ ಬಲಾಬಲ 284ರಲ್ಲಿದೆ. ಇತರ ಕೆಲವು ಸ್ವತಂತ್ರ ಅಭ್ಯರ್ಥಿಗಳೂ ಯುಪಿಎಗೆ ಬೆಂಬಲ ಸೂಚಿಸಿರುವುದರಿಂದ ಲೋಕಸಭೆಯಲ್ಲಿನ ಒಟ್ಟು ಸಂಖ್ಯಾಬಲ 290ಕ್ಕೇರುತ್ತದೆ.

543 ಲೋಕಸಭಾ ಸ್ಥಾನಗಳಲ್ಲಿ ಸರಕಾರಕ್ಕೆ ಬೇಕಾಗಿರುವುದು 272 ಸ್ಥಾನಗಳು ಮಾತ್ರ. ಹಾಗಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಂದ ಸರಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ರಾಜ್ಯಸಭೆಯಲ್ಲಿ ಮಂಡನೆ...
ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಸಭೆಯ ಅಧ್ಯಕ್ಷ ಹಮೀದ್ ಅನ್ಸಾರಿಯವರು ಸಭೆಯ ಮುಂದಿಟ್ಟರು.

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರು. ಇದರ ಬೆನ್ನಿಗೆ ಆರಂಭವಾದ ಚರ್ಚೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ, ಮಾಯಾವತಿ ನಾಯಕತ್ವದ ಬಹುಜನ ಸಮಾಜವಾದಿ ಪಕ್ಷ ಹಾಗೂ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.

ಈ ಹಿನ್ನೆಲೆಯಲ್ಲಿ ಹಲವು ಬಾರಿ ಕಲಾಪನ್ನು ಮುಂದೂಡಲಾಯಿತು. ಸಂಖ್ಯಾಬಲದ ಪ್ರಕಾರ ಯುಪಿಎ ಸರಕಾರದ ಈ ಮಸೂದೆ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಮತದಾನ ಮುಂದೂಡಿಕೆ....
ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಸಂಜೆ ಆರು ಗಂಟೆಗೆ ರಾಜ್ಯಸಭೆಯಲ್ಲಿ ಮತದಾನ ನಡೆಯಲಿದೆ ಎಂದು ಮಧ್ಯಾಹ್ನ ಎರಡು ಗಂಟೆಗೆ ಪ್ರಕಟಿಸಲಾಗಿತ್ತು.

ಆದರೆ ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರು ಸರ್ವಪಕ್ಷಗಳ ಸಭೆ ಕರೆದಿದ್ದು, ಈ ಹಿನ್ನೆಲೆಯಲ್ಲಿ ಮಸೂದೆಯ ಮೇಲಿನ ಮತದಾನವನ್ನು ನಾಳೆಗೆ ಮುಂದೂಡುವ ನಿರ್ಧಾರಕ್ಕೆ ಸ್ಪೀಕರ್ ಬಂದಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿದಂತೆ ಹೆಚ್ಚಿನ ಪಕ್ಷಗಳು ಮಸೂದೆಯ ಪರವಾಗಿರುವುದರಿಂದ ಬಹುಮತದಿಂದ ಕಾಯ್ದೆಯು ಅಂಗೀಕಾರವಾಗಲಿದೆ ಎಂಬ ನಿರೀಕ್ಷೆಗಳಿದ್ದರೂ ಪ್ರತಿಪಕ್ಷಗಳ ಭಾರೀ ಗದ್ದಲದ ಹಿನ್ನೆಲೆಯಲ್ಲಿ ಸರಕಾರ ನಿಲುವು ಬದಲಾಯಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಲೋಕಸಭೆಯಲ್ಲೂ ಗದ್ದಲ...
ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆಯಾಗುತ್ತಿದ್ದಂತೆ ಇತ್ತ ಲೋಕಸಭೆಯಲ್ಲೂ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳಗಳ ಸದಸ್ಯರು ಭಾರೀ ಗದ್ದಲ ಎಬ್ಬಿಸಿವೆ.

ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಪ್ರಶ್ನೋತ್ತರ ವೇಳೆ ಪ್ರಕಟಿಸುತ್ತಿದ್ದಂತೆ ಸದನದ ಬಾವಿಗಿಳಿದ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳಗಳ ಸದಸ್ಯರು, ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.

ಹಲವಾರು ಬಾರಿ ಸದನವನ್ನು ಮುಂದೂಡಿದ ಬಳಿಕವೂ ಸದಸ್ಯರು ತಮ್ಮ ಪಟ್ಟು ಬಿಡದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ