ಪೊಲೀಸ್ ಕ್ವಾರ್ಟರ್ಸ್‌ನಲ್ಲೇ 9ರ ಬಾಲಕಿಯ ಅತ್ಯಾಚಾರ, ಕೊಲೆ!
ಮುಂಬೈ, ಸೋಮವಾರ, 8 ಮಾರ್ಚ್ 2010( 16:00 IST )
ನಾಲ್ಕನೇ ತರಗತಿಯ ಒಂಬತ್ತರ ಹರೆಯದ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿ ಮುಂಬೈಯಲ್ಲಿನ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಶವವನ್ನು ಎಸೆದು ಹೋದ ಬರ್ಬರ ಘಟನೆಯೊಂದು ವರದಿಯಾಗಿದೆ.
ಕುರ್ಲಾದ (ಇ) ಪೊಲೀಸ್ ಕ್ವಾರ್ಟರ್ಸ್‌ನ ನಂ.109 ಕಟ್ಟಡದ ಮೇಲ್ಭಾಗದಲ್ಲಿ ಭಾನುವಾರ ಬೆಳಿಗ್ಗೆ ಬಾಲಕಿಯ ಶವ ಪತ್ತೆಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಆರು ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಇದು 21 ವರ್ಷದೊಳಗಿನ ಹದಿಹರೆಯದವರ ಕೃತ್ಯವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಬಟ್ಟೆ ಒಣಗಿಸುವಾಗ ಬೆಳಕಿಗೆ ಬಂತು... ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸವಾಗಿರುವ ಸಬ್ ಇನ್ಸ್‌ಪೆಕ್ಟರ್ ಒಬ್ಬರ ಪುತ್ರ 17ರ ಹರೆಯದ ಹುಡುಗ ಭಾನುವಾರ ಬೆಳಿಗ್ಗೆ 10 ಗಂಟೆ ಹೊತ್ತಿಗೆ ಬಟ್ಟೆ-ಬರೆಗಳನ್ನು ಒಣಗಿಸಲೆಂದು ಟೆರೇಸ್ ಮೇಲೆ ಹೋಗಿದ್ದ. ಈ ಸಂದರ್ಭದಲ್ಲಿ ನೀರಿನ ಟ್ಯಾಂಕ್ ಪಕ್ಕ ಎರಡು ಕಾಲುಗಳು ಕಂಡವು. ಹತ್ತಿರ ಹೋಗಿ ನೋಡಿದಾಗ ಬಾಲಕಿಯ ಅರೆಬೆತ್ತಲೆ ಶವವಿತ್ತು.
ತಕ್ಷಣವೇ ಕೆಳಗೆ ಬಂದ ಹುಡುಗ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಕರೆದುಕೊಂಡು ಹೋಗಿದ್ದಾನೆ ಎಂದು ನೆಹರೂ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಗು ಕಾಣೆಯಾಗಿತ್ತು... ಅದೇ ದಿನ (ಭಾನುವಾರ) ರಾತ್ರಿ ಒಂದು ಗಂಟೆಗೆ ನನ್ನ ಮಗಳು ಅಂಜಲಿ ಜೈಸ್ವಾಲ್ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ರಮೇಶ್ ಜೈಸ್ವಾಲ್ ದೂರು ದಾಖಲಿಸಿದ್ದರು.
ಶನಿವಾರ ರಾತ್ರಿ ಏಳು ಗಂಟೆ ಹೊತ್ತಿಗೆ ಮನೆಗೆ ಬಂದಿದ್ದ ಅವರಿಗೆ ಮಗಳು ಮನೆಯಲ್ಲಿ ಇರದೇ ಇದ್ದುದು ಗಮನಕ್ಕೆ ಬಂದಿತ್ತು. ಆಡಲೆಂದು ಹೊರಗಡೆ ಹೋಗಿರಬಹುದು ಎಂದು ಅಕ್ಕ-ಪಕ್ಕದಲ್ಲಿ ವಿಚಾರಿಸಿದರೂ ಪ್ರಯೋಜನಕ್ಕೆ ಬಂದಿರಲಿಲ್ಲ. ನಂತರ ಅವರು ಮಧ್ಯರಾತ್ರಿಯೇ ಪೊಲೀಸ್ ದೂರು ನೀಡಿದ್ದರು.
ಅತ್ಯಾಚಾರ ಮಾಡಿ ಕೊಂದಿದ್ದರು... ಆರಂಭಿಕ ತನಿಖೆಗಳ ಪ್ರಕಾರ ಕುರ್ಲಾ ರೈಲ್ವೇ ನಿಲ್ದಾಣ ಪಕ್ಕದ ಆಲಿಬಾಬಾ ಸ್ಟ್ರೀಟ್‌ನಲ್ಲಿನ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿದ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
ತುಟಿಗಳಲ್ಲಿ ರಕ್ತ ಒಡೆದಿರುವುದು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬುದಕ್ಕೆ ಪೂರಕವಾಗಿದೆ ಮತ್ತು ಬಾಲಕಿಯ ಖಾಸಗಿ ಭಾಗಗಳಲ್ಲಿ ರಕ್ತ ಒಸರಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಕಂಡು ಬಂದಿದೆ.
ಬಹುಶಃ ಬಲವಂತವಾಗಿ ಬಾಲಕಿಯನ್ನು ಟೆರೇಸಿಗೆ ಕರೆ ತರಲಾಗಿದೆ-- ಹಾಗಾಗಿ ಮೈ ಮೇಲೆ ತರಚು ಗಾಯ, ಬೆನ್ನು ಮತ್ತು ಕೈಗಳಿಗೆ ಪೆಟ್ಟಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇದು ಎರಡನೇ ನಿಗೂಢತೆ... ಕೆಲವೇ ದಿನಗಳ ಹಿಂದಷ್ಟೇ (ಫೆಬ್ರವರಿ 10) ಆರರ ಹರೆಯದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈಯಲಾಗಿತ್ತು. ಇದೇ ಪೊಲೀಸ್ ಠಾಣಾ ವ್ಯಾಪ್ತಿಯ ಏಳು ಮಹಡಿ ಕಟ್ಟಡವೊಂದರ ಟೆರೇಸ್ ಮೇಲೆ ಶವವನ್ನು ಎಸೆಯಲಾಗಿತ್ತು.
ಈ ಪ್ರಕರಣವಿನ್ನೂ ಪತ್ತೆಯಾಗಿಲ್ಲ. ಸುಮಾರು 50ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದು, ಮೂರು ಯುವಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದಿರುವ ಪೊಲೀಸರು, ಎರಡೂ ಪ್ರಕರಣಗಳು ಸಾಮ್ಯತೆಯಿದ್ದು ಒಂದೇ ವ್ಯಕ್ತಿ ಇದನ್ನು ನಡೆಸಿರುವ ಸಾಧ್ಯತೆಯಿದೆ ಎಂದಿದ್ದಾರೆ.