ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನ ಸಯೀದ್‌ನನ್ನು ಹಸ್ತಾಂತರಿಸಬೇಕೆಂದು ಕೇಳಿದ್ದೆವು: ಭಾರತ (Pakistan | Hafiz Saeed | India | Shah Mahmood Qureshi)
Bookmark and Share Feedback Print
 
ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಬಂಧಿಸಬೇಕೆಂದು ಭಾರತ ಬೇಡಿಕೆ ಮುಂದೊಡ್ಡಿಲ್ಲ ಮತ್ತು ಈ ಸಂಬಂಧ ಯಾವುದೇ ಸಾಕ್ಷ್ಯಗಳನ್ನು ಹಸ್ತಾಂತರಿಸಿಲ್ಲ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರತ ತಳ್ಳಿ ಹಾಕಿದ್ದು, ಆತನನ್ನು ಹಸ್ತಾಂತರಿಸಬೇಕೆಂದು ನಾವು ಮಾತುಕತೆ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಒತ್ತಾಯಿಸಿದ್ದೆವು ಎಂದು ಪ್ರತಿಕ್ರಿಯಿಸಿದೆ.

ಭಾರತ ವಿರೋಧಿ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಾ ಭಯೋತ್ಪಾದನಾ ಕೃತ್ಯಗಳಲ್ಲಿ ನಿರತವಾಗಿರುವ ಸಯೀದ್‌ನನ್ನು ಬಂಧಿಸಬೇಕು ಮತ್ತು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಸಂದರ್ಭದಲ್ಲಿ ಭಾರತ ಹೇಳಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಸಯೀದ್ ಪಾತ್ರವನ್ನು ಪುಷ್ಠೀಕರಿಸುವ ದಾಖಲೆಗಳನ್ನು ನಾವು 2009ರ ಆಗಸ್ಟ್ 21ರಂದು ಪಾಕಿಸ್ತಾನಕ್ಕೆ ಹಸ್ತಾಂತರಿಸಿದ್ದೇವೆ. 2010ರ ಫೆಬ್ರವರಿ 25ರಂದು ದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಜತೆಗಿನ ಮಾತುಕತೆ ಸಂದರ್ಭದಲ್ಲಿ ಆತನ ಹೆಸರುಳ್ಳ ಮತ್ತೊಂದು ದಾಖಲೆಯನ್ನೂ ನಾವು ಪಾಕಿಸ್ತಾನಕ್ಕೆ ನೀಡಿದ್ದೇವೆ ಎಂದು ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತವು ಹಫೀಜ್ ಸಯೀದ್ ವಿರುದ್ಧ ಯಾವುದೇ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿಲ್ಲ. ಆತನನ್ನು ಬಂಧಿಸುವಂತೆಯೂ ನಮ್ಮಲ್ಲಿ ಹೇಳಿಲ್ಲ. ಅಷ್ಟೇ ಏಕೆ, ದೆಹಲಿಯಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಹಫೀಜ್ ಸಯೀದ್ ಪ್ರಸ್ತಾಪವನ್ನೇ ಭಾರತ ಮಾಡಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಮತ್ತು ದೆಹಲಿಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರ ಜತೆ ಮಾತುಕತೆ ನಡೆಸಿದ್ದ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಹೇಳಿಕೆ ನೀಡಿದ್ದರು.

ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಮೊದಲ ಬಾರಿ ಭಾರತ ನೀಡಿದ್ದ ಪುರಾವೆಗಳನ್ನು ಆಧರಿಸಿ ಮತ್ತು ವಿಶ್ವಸಂಸ್ಥೆ ಜಮಾತ್ ಉದ್ ದಾವಾದ ಮೇಲೆ ಹೇರಿದ ನಿಷೇಧವನ್ನಾಧರಿಸಿ ಪಾಕಿಸ್ತಾನವು ಸಯೀದ್‌ನನ್ನು ಗೃಹಬಂಧನದಲ್ಲಿಟ್ಟಿತ್ತು. ಆದರೆ 2009ರ ಜುಲೈ ತಿಂಗಳಲ್ಲಿ ಆತನನ್ನು ಬಂಧಮುಕ್ತಗೊಳಿಸಲಾಯಿತು. ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಗೃಹಬಂಧನಕ್ಕೊಳಪಡಿಸಲಾಯಿತಾದರೂ, ಕೆಲವೇ ದಿನಗಳಲ್ಲಿ ಈ ನಾಟಕವೂ ಕೊನೆಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ