ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾ, ಮಮತಾರೂ ಕೈಕೊಟ್ಟರೆ?; ಇದು ಕಾಂಗ್ರೆಸ್ ಚಿಂತೆ..! (M Karunanidhi | Mamata Banerjee | UPA | Lalu Prasad Yadav)
Bookmark and Share Feedback Print
 
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಸರಕಾರದ ಪರ ಲೆಕ್ಕಕ್ಕಿಂತ ಹೆಚ್ಚೇ ಬಹುಮತವಿದ್ದರೂ ರಾಷ್ಟ್ರೀಯ ಜನತಾದಳ ಮತ್ತು ಸಮಾಜವಾದಿ ಪಕ್ಷಗಳು ಸರಕಾರದಿಂದ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಘೋಷಿಸಿದ ತಕ್ಷಣವೇ ವಿಧೇಯಕದ ಮೇಲಿನ ಮತದಾನವನ್ನು ಒಮ್ಮಿಂದೊಮ್ಮೆಲೇ ಮುಂದೂಡಿದ್ದು ಸರಕಾರದ ದೂರದೃಷ್ಟಿಯೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂದು ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕ ಮಂಡನೆಯಾದ ಬಳಿಕ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷ, ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಮತ್ತು ಶರದ್ ಯಾದವ್ ಅವರ ಸಂಯುಕ್ತ ಜನತಾದಳಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದರೂ ಮಸೂದೆಯ ಮೇಲಿನ ಮತದಾನವನ್ನು ಮುಂದೂಡುವ ಅಗತ್ಯ ಪ್ರಬಲ ಯುಪಿಎ ಸರಕಾರಕ್ಕಿರಲಿಲ್ಲ.

ರಾಜ್ಯಸಭೆಯಲ್ಲಿ ವಿಧೇಯಕವನ್ನು ಚರ್ಚೆಗೊಳಪಡಿಸದೆ ನೇರ ಮತದಾನಕ್ಕೆ ಒಳಪಡಿಸುವ ಅವಕಾಶವಿರುವುದರಿಂದ ಯುಪಿಎ ಸರಕಾರಕ್ಕೆ ಸುಲಭವಾಗಿ ಮಸೂದೆಗೆ ಅಂಗೀಕಾರ ಪಡೆದುಕೊಳ್ಳಬಹುದಿತ್ತು. ಪ್ರತಿರೋಧ ಒಡ್ಡುತ್ತಿರುವ ಪಕ್ಷಗಳು ವಿರುದ್ಧ ಮತದಾನ ಮಾಡಿದರೂ ಕಾಯ್ದೆ ಅಂಗೀಕಾರಕ್ಕೆ ಯಾವುದೇ ಅಡ್ಡಿಯಾಗುತ್ತಿರಲಿಲ್ಲ. ಆದರೂ ಸರಕಾರ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಂದು ಹೆಜ್ಜೆ ಹಿಂದಕ್ಕಿಟ್ಟಿದೆ.

ಡಿಎಂಕೆ, ಟಿಸಿಗಳೂ ಬ್ಲ್ಯಾಕ್‌ಮೇಲ್ ಮಾಡುತ್ತಿವೆ...
ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿಚಾರದಲ್ಲಿ ಮಗ್ಗುಲ ಮುಳ್ಳಾಗುತ್ತಿರುವ ಕರುಣಾನಿಧಿಯವರ ಡಿಎಂಕೆ ಮತ್ತು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಇತ್ತೀಚಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಯನ್ನೂ ತೀವ್ರವಾಗಿ ವಿರೋಧಿಸುತ್ತಿವೆ. ಅಲ್ಲದೆ ಈ ಕುರಿತ 2010-11ರ ಸಾಲಿನ ಬಜೆಟ್ ಸದನದಲ್ಲಿ ಇನ್ನೂ ಅಂಗೀಕಾರ ಪಡೆದುಕೊಂಡಿಲ್ಲ.

ಈಗ ಲೆಕ್ಕಕ್ಕಿಲ್ಲ ಎಂದೇ ಮೇಲ್ನೋಟಕ್ಕೆ ಭಾವಿಸಲಾಗುತ್ತಿರುವ ಸಮಾಜವಾದಿ (22) ಮತ್ತು ರಾಷ್ಟ್ರೀಯ ಜನತಾದಳ ಪಕ್ಷಗಳು (4) ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡರೆ, ಅತ್ತ ಯುಪಿಎ ಬಲಾಬಲ ಸುಮಾರು 290ಕ್ಕೆ ಕುಸಿಯುತ್ತದೆ. ಸುಭದ್ರ ಸರಕಾರಕ್ಕೆ ಬೇಕಾಗಿರುವುದು 272 ಮಾತ್ರ. ಲೆಕ್ಕಾಚಾರದ ನಿಟ್ಟಿನಲ್ಲಿ ಇದು ಸರಿಯೆನಿಸುತ್ತದೆ.

ಆದರೆ ಬೆಲೆಯೇರಿಕೆಯನ್ನೇ ಮುಂದಿಟ್ಟುಕೊಂಡು ಡಿಎಂಕೆ (18) ಮತ್ತು ತೃಣಮೂಲ ಕಾಂಗ್ರೆಸ್‌ಗಳು (19) ಬ್ಲ್ಯಾಕ್‌ಮೇಲ್ ಮಾಡಿದರೆ ಆಗ ಸರಕಾರವೇ ಅತಂತ್ರವಾಗಬಹುದು (253ಕ್ಕೆ ಇಳಿಯಬಹುದು) ಎಂಬುದು ಯುಪಿಎ ಸರಕಾರದ ದೂರದೃಷ್ಟಿ. ಇದೇ ಕಾರಣದಿಂದ ಮಹಿಳಾ ಮೀಸಲಾತಿ ವಿಧೇಯಕಕ್ಕೆ ತೀವ್ರ ಪ್ರತಿರೋಧ ತೋರಿಸುತ್ತಿರುವ ಲಾಲೂ ಮತ್ತು ಮುಲಾಯಂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿಯಿಂದ ಸರ್ವಪಕ್ಷ ಸಭೆ...
ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದರೂ, ಅಂಗೀಕಾರಕ್ಕಾಗಿನ ಮತದಾನವನ್ನು ನಾಳೆಯವರೆಗೆ ಮುಂದೂಡಲಾಗಿದೆ.

ಅದಕ್ಕೂ ಮೊದಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸರ್ವಪಕ್ಷಗಳ ಸಭೆಯನ್ನು (ಮಾರ್ಚ್ 9ರಂದು) ಕರೆದಿದ್ದಾರೆ. ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಸಭೆ ಕರೆಯಲಾಗಿದೆ ಎಂದು ಪ್ರಧಾನಿಯವರು ಹೇಳಿಕೊಂಡಿದ್ದಾರೆ.

ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಮಹಿಳಾ ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದ್ದು, ಮಹಿಳಾ ಮೀಸಲಾತಿಯನ್ನೇ ನೇರವಾಗಿ ವಿರೋಧಿಸುತ್ತಿಲ್ಲ ಎಂದು ಅತ್ತ ಸಮಾಜವಾದಿ ಮತ್ತು ರಾಷ್ಟ್ರೀಯ ಜನತಾದಳಗಳು ಹೇಳಿರುವುದರಿಂದ ಈಗಿರುವ ಮಸೂದೆಗೆ ಮತ್ತೆ ತಿದ್ದುಪಡಿ ತರುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ