ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಪ್ರೀಂ ಕೋರ್ಟಿನಲ್ಲಿ ಸುಪ್ರೀಂ ಕೋರ್ಟಿನಿಂದಲೇ ಮೇಲ್ಮನವಿ..! (CJI office | Supreme Court | RTI Act | K G Balakrishnan)
Bookmark and Share Feedback Print
 
ಭಾರತದ ಮುಖ್ಯ ನ್ಯಾಯಮೂರ್ತಿಯವರ ಕಚೇರಿ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಮತ್ತು ಇಲ್ಲಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಬಹುದು ಎಂದು ತೀರ್ಪು ನೀಡಿದ್ದ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸ್ವತಃ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಮೇಲ್ಮನವಿ ಸಲ್ಲಿಸಿದೆ.

ಮುಖ್ಯ ನ್ಯಾಯಮೂರ್ತಿಯವರ ಕಚೇರಿಯಲ್ಲಿನ ಮಾಹಿತಿಗಳು ಮಹತ್ವದ್ದಾಗಿದ್ದು, ಇದನ್ನು ಬಹಿರಂಗಪಡಿಸಿದರೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಹುದು ಎಂಬ ಭೀತಿಯನ್ನು ಇತರ ನ್ಯಾಯಾಧೀಶರುಗಳ ಜತೆ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ಚರ್ಚಿಸಿದ ನಂತರ ಮೇಲ್ಮನವಿ ಸಿದ್ಧಪಡಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ಅವರಿಗೆ ಸಲ್ಲಿಸಲಾಗಿದೆ.

ತಿಂಗಳ ಹಿಂದೆಯೇ ಈ ಮೇಲ್ಮನವಿಯ ಕರಡು ಪ್ರತಿಯನ್ನು ಸಿದ್ಧಗೊಳಿಸಲಾಗಿದ್ದರೂ ಸೋಮವಾರವಷ್ಟೇ ಅಪೆಕ್ಸ್ ಕೋರ್ಟ್‌ನಲ್ಲಿ ನ್ಯಾಯವಾದಿ ದೇವದತ್ ಕಾಮತ್ ಮೇಲ್ಮನವಿ ಸಲ್ಲಿಸಿದರು. ಈ ಪ್ರಕರಣವನ್ನು ಅಟಾರ್ನಿ ಜನರಲ್ ಜಿ.ಇ. ವಹಾನ್ವತಿ ವಕಾಲತ್ತು ವಹಿಸಲಿದ್ದಾರೆ.

ಹೈಕೋರ್ಟ್ ಆದೇಶಕ್ಕೆ ತಕ್ಷಣವೇ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಬಯಸುತ್ತಿದೆ. ಹಾಗಾಗದೇ ಇದ್ದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ತನ್ನ ಮಾಹಿತಿಯನ್ನು ನೀಡಬೇಕಾದ ಅನಿವಾರ್ಯತೆಗೆ ಸುಪ್ರೀಂ ಕೋರ್ಟ್ ಸಿಲುಕಲಿದೆ.

ಮುಖ್ಯ ನ್ಯಾಯಮೂರ್ತಿಗಳ ಕಚೇರಿಯೂ ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತದೆ ಎಂದು ಜನವರಿ 12ರಂದು ದೆಹಲಿ ಹೈಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ಹೇಳಿತ್ತು. ಅಲ್ಲದೆ ಸುಪ್ರೀಂ ಕೋರ್ಟ್ ಮನವಿಯನ್ನು ತಳ್ಳಿ ಹಾಕಿದ್ದ ಅದು, ನ್ಯಾಯಾಂಗದ ಸ್ವಾತಂತ್ರ್ಯವು ಒಬ್ಬ ನ್ಯಾಯಾಧೀಶನ ವೈಯಕ್ತಿಕ ಹಕ್ಕಲ್ಲ, ಆತನ ಜವಾಬ್ದಾರಿ ಮಾತ್ರ ಎಂದು ಹೇಳಿತ್ತು.

ತನ್ನ ಕಚೇರಿಯು ಪಾರದರ್ಶಕ ಕಾನೂನು ವ್ಯಾಪ್ತಿಗೊಳಪಟ್ಟಿಲ್ಲ. ಹಾಗಾಗಿ ನ್ಯಾಯಾಧೀಶರುಗಳ ಆಸ್ತಿ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಬಹಿರಂಗಪಡಿಸಬೇಕಾಗಿಲ್ಲ ಎಂದು ಹೇಳುತ್ತಾ ಬಂದಿದ್ದ ಬಾಲಕೃಷ್ಣನ್ ಅವರಿಗೆ ದೆಹಲಿ ಹೈಕೋರ್ಟ್ ತೀರ್ಪು ಪ್ರಮುಖ ಹೊಡೆತ ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ