ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನಾದ್ರೂ ಬಾಯಿ ಮುಚ್ಚಿಕೊಂಡಿರಿ: ರಾಜ್ ಠಾಕ್ರೆಗೆ ಸುಪ್ರೀಂ (Raj Thackeray | Rioting cases | Anti-North Indian | MNS)
ಇನ್ನಾದ್ರೂ ಬಾಯಿ ಮುಚ್ಚಿಕೊಂಡಿರಿ: ರಾಜ್ ಠಾಕ್ರೆಗೆ ಸುಪ್ರೀಂ
ನವದೆಹಲಿ, ಮಂಗಳವಾರ, 9 ಮಾರ್ಚ್ 2010( 09:41 IST )
'ನಾಲಿಗೆ ಮೇಲೆ ಹಿಡಿತವಿರಲಿ, ಇದು ಪ್ರಜಾಪ್ರಭುತ್ವ ಎಲ್ಲರಿಗೂ ಎಲ್ಲಾ ಕಡೆ ಬದುಕುವ ಹಕ್ಕಿದೆ. ನೀವು ನಿಮ್ಮದೆ ಸಿದ್ದಾಂತ ಇಟ್ಟುಕೊಂಡು ಎಷ್ಟು ದಿನ ಉತ್ತರ ಭಾರತೀಯರ ವಿರುದ್ಧ ಕೆಂಡಕಾರುತ್ತೀರಿ'?...ಹೀಗೆ ಎಂಎನ್‌ಎಸ್ ವರಿಷ್ಠ ರಾಜ್ ಠಾಕ್ರೆಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ರೀತಿ ಇದು.
ನೀವು ನೀಡುವ ಹೇಳಿಕೆಯಿಂದ ಸಮಾಜದಲ್ಲಿ ಗಲಭೆ ಸೃಷ್ಟಿಯಾಗುತ್ತೆ ಎನ್ನುವುದನ್ನು ಮರೆಯಬೇಡಿ. ಉತ್ತರ ಭಾರತೀಯರ ವಿರುದ್ಧ ನೀಡಿದ್ದ ಪ್ರಚೋದನಾಕಾರಿ ಹೇಳಿಕೆಯಿಂದ ಈಗಾಗಲೇ ಹಲವು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಇನ್ನು ಮುಂದಾದರೂ ಇಂತಹ ಬಾಯಿಬಡುಕತನದಿಂದ ದೂರವಿರಿ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಉತ್ತರ ಭಾರತೀಯರ ವಿರುದ್ಧ ಹರಿಹಾಯ್ದಿದ್ದ ರಾಜ್ ಠಾಕ್ರೆ ವಿರುದ್ಧ ಈಗಾಗಲೇ ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ಹಲವೆಡೆ 73ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಈ ನಿಟ್ಟಿನಲ್ಲಿ ಬೇರೆ ರಾಜ್ಯಗಳಲ್ಲಿ ದಾಖಲಾಗಿರುವ ಕೇಸುಗಳನ್ನು ದೆಹಲಿಗೆ ವರ್ಗಾಯಿಸಬೇಕೆಂಬ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ ಈ ಎಚ್ಚರಿಕೆ ನೀಡಿದೆ.
2008ರಲ್ಲಿ ಉತ್ತರ ಭಾರತೀಯರಿಗೆ ಮಹಾರಾಷ್ಟ್ರದ ನೆಲದಲ್ಲಿ ಅವಕಾಶವಿಲ್ಲ ಎಂದು ಠಾಕ್ರೆ ಹೇಳಿಕೆ ನೀಡಿದ್ದ ಪರಿಣಾಮ ಸಾಕಷ್ಟು ದೊಂಬಿ ನಡೆದಿತ್ತು. ಈ ಘಟನೆ ನಂತರ ಠಾಕ್ರೆ ಬಂಧನವಾದ ಸಂದರ್ಭದಲ್ಲಿ ಸಾಕಷ್ಟು ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು. ಅದರ ಪರಿಣಾಮ ಎಂಎನ್‌ಎಸ್ ವರಿಷ್ಠ ಠಾಕ್ರೆ ವಿರುದ್ಧ 73ಕ್ರಿಮಿನಲ್ ಕೇಸುಗಳು ದಾಖಲಾಗಿದ್ದವು. ಅದರಲ್ಲಿ ಆರು ಪ್ರಕರಣಗಳಿಗೆ ರಾಜ್ ಕೋರ್ಟ್‌ಗೆ ಹಾಜರಾಗಿ, ಜಾಮೀನು ಪಡೆದಿದ್ದರು.
ಇನ್ನುಳಿದ ಪ್ರಕರಣಗಳ ವಿಚಾರಣೆಗೆ ರಾಜ್ ಹಾಜರಾಗಿ, ಜಾಮೀನು ಪಡೆಯಬೇಕಾಗಿದೆ ಎಂದು ಇತ್ತೀಚೆಗಷ್ಟೇ ಪೊಲೀಸ್ ಮೂಲಗಳು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿತ್ತು.