ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂಡಿಯನ್ ಮುಜಾಹಿದೀನ್ 'ಕರಾಚಿ ಪ್ರೊಜೆಕ್ಟ್'ನಲ್ಲಿ ಬೆಂಗಳೂರು! (Bangalore | terror alert | Indian Mujahideen | Karachi Project)
Bookmark and Share Feedback Print
 
ದೇಶದಾದ್ಯಂತ ಕುಕೃತ್ಯಗಳನ್ನು ನಡೆಸುವ ಸಲುವಾಗಿ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕಾ ಸಂಘಟನೆ ಹಮ್ಮಿಕೊಂಡಿರುವ 'ಕರಾಚಿ ಪ್ರೊಜೆಕ್ಟ್'ನಲ್ಲಿ ಬೆಂಗಳೂರು, ಮುಂಬೈ ಮತ್ತು ಕೊಲ್ಕತ್ತಾಗಳು ಪ್ರಮುಖ ಗುರಿಗಳು ಎಂದು ಬಂಧಿತ ಉಗ್ರ ಮಾಹಿತಿ ನೀಡಿದ್ದು, ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಭದ್ರತೆ ಬಿಗಿಗೊಳಿಸಿ ಎಂದು ಕೇಂದ್ರ ಗೃಹ ಸಚಿವಾಲಯವು ಕಟ್ಟೆಚ್ಚರ ರವಾನಿಸಿದೆ.

ಇಂಡಿಯನ್ ಮುಜಾಹಿದೀನ್ ಶಂಕಿತ ಭಯೋತ್ಪಾದಕ ಸಲ್ಮಾನ್ ಅಹ್ಮದ್ ನೀಡಿರುವ ಹೇಳಿಕೆಯನ್ನು ಆಧರಿಸಿ ಗೃಹ ಸಚಿವಾಲಯವು ಮಹಾರಾಷ್ಟ್ರ, ಪಶ್ಚಿಮ ಬಂಗಾಲ ಮತ್ತು ಕರ್ನಾಟಕ ಸರಕಾರಗಳಿಗೆ ಎಚ್ಚರಿಕೆ ರವಾನಿಸಿದ್ದು, ಭಯೋತ್ಪಾದಕರ ಯಾವುದೇ ಕೃತ್ಯಗಳನ್ನು ವಿಫಲಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ.

ನಾವು ಪಡೆದ ಯಾವುದೇ ಮಾಹಿತಿಗಳನ್ನು ನಿರ್ಲಕ್ಷಿಸುವ ಅವಕಾಶಗಳನ್ನೇ ನೀಡುವುದಿಲ್ಲ. ತಕ್ಷಣವೇ ಅಗತ್ಯ ಭದ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸಂಬಂಧಪಟ್ಟ ರಾಜ್ಯ ಸರಕಾರಗಳಿಗೆ ನಾವು ಕಟ್ಟೆಚ್ಚರ ರವಾನಿಸಿದ್ದೇವೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಹಮದಾಬಾದ್, ವಾರಣಾಸಿ ಮತ್ತು ಗೋರಖ್‌ಪುರ್ ಸರಣಿ ಸ್ಫೋಟಗಳಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿರುವ ಸಲ್ಮಾನ್, 'ಕರಾಚಿ ಪ್ರೊಜೆಕ್ಟ್'ಗಾಗಿ ಕರಾಚಿ, ಕಾಠ್ಮಂಡು, ದುಬೈ ಮತ್ತು ಮಧ್ಯ ಪ್ರಾಚ್ಯದ ಕೆಲವು ಜಾಗಗಳಲ್ಲಿ ನೆಲೆಗಳನ್ನು ಇಂಡಿಯನ್ ಮುಜಾಹಿದೀನ್ ಸ್ಥಾಪಿಸಿರುವುದನ್ನು ಒಪ್ಪಿಕೊಂಡಿದ್ದಾನೆ.

ಅಲ್ಲದೆ ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತರು ಪಾಕಿಸ್ತಾನಕ್ಕೆ ನೇಪಾಳ ಅಥವಾ ಬಾಂಗ್ಲಾದೇಶದ ಮೂಲಕ ತರಬೇತಿಗಾಗಿ ಹೋಗುತ್ತಾರೆ. ತಾನು ಪಾಕಿಸ್ತಾನದಿಂದ ಇದೇ ವರ್ಷದ ಜನವರಿಯಲ್ಲಷ್ಟೇ ವಾಪಸಾಗಿದ್ದೇನೆ ಎಂದೂ ಆತ ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಯನ್ ಮುಜಾಹಿದೀನ್ ಮಹತ್ವಾಕಾಂಕ್ಷೆಯ ಭಯೋತ್ಪಾದನಾ ಯೋಜನೆ 'ಕರಾಚಿ ಪ್ರೊಜೆಕ್ಟ್'ಗಾಗಿ ಭಾರತೀಯ ಯುವಕರನ್ನು ಪಾಕಿಸ್ತಾನಕ್ಕೆ ತರಬೇತಿಗೆಂದು ಕರೆಸಿಕೊಳ್ಳಲಾಗುತ್ತದೆ. ತರಬೇತಿ ಮುಕ್ತಾಯವಾದ ಬಳಿಕ ಅವರನ್ನು ಮರಳಿ ದೇಶಕ್ಕೆ ಕಳುಹಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸುವಂತೆ ನಿರ್ದೇಶನ ನೀಡಲಾಗುತ್ತದೆ.

ಉತ್ತರ ಪ್ರದೇಶದ ಸಿದ್ಧಾರ್ಥ ನಗರದಲ್ಲಿ ಅಲ್ಲಿನ ಭಯೋತ್ಪಾದನಾ ನಿಗ್ರಹ ದಳದಿಂದ ಶನಿವಾರ ಬಂಧಿಸಲ್ಪಟ್ಟಿರುವ ಸಲ್ಮಾನ್ ಪ್ರಸಕ್ತ ದೆಹಲಿ ಪೊಲೀಸರ ವಶದಲ್ಲಿದ್ದಾನೆ.

2008ರ ದೆಹಲಿ ಸರಣಿ ಸ್ಫೋಟದಲ್ಲಿ ಆರೋಪಿಯಾಗಿರುವ 21ರ ಹರೆಯದ ಸಲ್ಮಾನ್ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಪ್ರಮುಖ ಸದಸ್ಯ ಎಂದು ಹೇಳಲಾಗಿದೆ. ಈತ ದೇಶದ ಇತರ ಹಲವು ಸರಣಿ ಸ್ಫೋಟಗಳಲ್ಲೂ ಪಾತ್ರವಹಿಸಿದ್ದಾನೆ ಎಂದು ಮೂಲಗಳು ಹೇಳಿವೆ.

'ಕರಾಚಿ ಪ್ರೊಜೆಕ್ಟ್'ಗೆ ಅಮೀರ್ ರಾಜಾ ಖಾನ್ ಎಂಬಾತ ಸಂಚಾಲಕನಾಗಿದ್ದು, ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕರಾದ ಕರ್ನಾಟಕದ ಭಟ್ಕಳ ಸಹೋದರರಾದ ರಿಯಾಜ್ ಮತ್ತು ಇಕ್ಬಾಲ್ ಮುಂದಾಳುತ್ವ ವಹಿಸುತ್ತಿದ್ದಾರೆ. ಬಂಧಿತ ಸಲ್ಮಾನ್‌ಗೆ ಕರಾಚಿ ಪ್ರಾಂತ್ಯದ ಐಎಸ್ಐ ನಡೆಸುವ ಶಿಬಿರವೊಂದರಲ್ಲಿ ವಿಧ್ವಂಸಕ ತರಬೇತಿಗಳನ್ನು ನೀಡಲಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ