ಸ್ಪೀಕರ್ ಹಮೀದ್ ಅನ್ಸಾರಿಯವರು ಮಹಿಳಾ ಮಸೂದೆಯನ್ನು ಓದುತ್ತಿದ್ದ ಸಂದರ್ಭದಲ್ಲಿ ಸದನದ ಬಾವಿಗಿಳಿದು ಮಸೂದೆಯ ಪ್ರತಿಗಳನ್ನು ಸ್ಪೀಕರ್ ಅವರ ಕೈಯಿಂದ ಕಿತ್ತುಕೊಂಡು ಹರಿದು ಹಾಕಿ ಸದನಕ್ಕೆ ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಗೆ ಸೇರಿದ ಏಳು ರಾಜ್ಯಸಭಾ ಸದಸ್ಯರನ್ನು ಬಜೆಟ್ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.
ಯುಪಿಎ ಸರಕಾರ ನಿನ್ನೆ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ ನಂತರ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ ಮತ್ತು ಸಂಯುಕ್ತ ಜನತಾದಳಗಳ ಸದಸ್ಯರು ಭಾರೀ ಕೋಲಾಹಲ ಎಬ್ಬಿಸಿದ್ದರು. ಅಲ್ಲದೆ ಸದನದ ಬಾವಿಗಿಳಿದು ಸ್ಪೀಕರ್ ಅವರು ಓದುತ್ತಿದ್ದ ಮಸೂದೆಯ ಪ್ರತಿಯನ್ನು ಕಿತ್ತುಕೊಂಡು ಹರಿದು ಹಾಕಿದ್ದರು.
ಈ ಸಂಬಂಧ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವರು ಸ್ಪೀಕರ್ ಅವರ ಕ್ಷಮೆ ಕೋರಿದ್ದ ಹೊರತಾಗಿಯೂ ಕ್ರಮಕ್ಕೆ ಮುಂದಾಗಿರುವ ಸಭಾಧ್ಯಕ್ಷರು, ಏಳು ಮಂದಿ ಸದಸ್ಯರನ್ನು ಅಧಿವೇಶನದಿಂದ ಅಮಾನತುಗೊಳಿಸಿದ್ದಾರೆ. ಇವರು ಬಜೆಟ್ ಅಧಿವೇಶನ ಮುಗಿಯುವವರೆಗೆ ಕಲಾಪದಲ್ಲಿ ಭಾಗವಹಿಸುವಂತಿಲ್ಲ.
ಸಮಾಜವಾದಿ ಪಕ್ಷದ ವೀರಪಾಲ್ ಸಿಂಗ್ ಯಾದವ್, ನಂದ ಕಿಶೋರ್ ಯಾದವ್, ಅಮೀರ್ ಅಲಂ ಖಾನ್ ಮತ್ತು ಕಮಲಾ ಅಖ್ತರ್, ರಾಷ್ಟ್ರೀಯ ಜನತಾದಳದ ಸುಭಾಷ್ ಯಾದವ್, ಲೋಕ ಜನಶಕ್ತಿ ಪಕ್ಷದ ಶಬೀರ್ ಆಲಿ ಹಾಗೂ ಪಕ್ಷೇತರ ಸದಸ್ಯ ಇಜಾಜ್ ಆಲಿಯವರೇ ಅಮಾನತುಗೊಂಡ ರಾಜ್ಯಸಭಾ ಸದಸ್ಯರು.
ಮಸೂದೆ ಮೇಲಿನ ಮತದಾನ ಇಂದು? ನಿನ್ನೆ ಭಾರೀ ವಿರೋಧದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಮತದಾನವನ್ನು ಇಂದು ನಡೆಸಲಾಗುತ್ತದೆಯೇ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಆದರೆ ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಇಂದು ಕೂಡ ಭಾರೀ ಗದ್ದಲ ನಡೆಯುತ್ತಿದೆ.
ಇಂದು ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಮಾಜವಾದಿ, ಆರ್‌ಜೆಡಿ, ಜೆಡಿಯು ಮತ್ತು ಬಿಎಸ್‌ಪಿ ಪಕ್ಷಗಳು ಮತ್ತೆ ಕೋಲಾಹಲ ಆರಂಭಿಸಿದ್ದು, ಯಾವುದೇ ಕಾರಣಕ್ಕೂ ಮಸೂದೆಯ ಅಂಗೀಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗುತ್ತಿವೆ.
ತೀವ್ರ ಗದ್ದಲವೇರ್ಪಟ್ಟ ಹಿನ್ನೆಲೆಯಲ್ಲಿ ರಾಜ್ಯಸಭಾ ಕಲಾಪವನ್ನು ಸಂಜೆ ಗಂಟೆಯವರೆಗೆ ಸ್ಪೀಕರ್ ಮುಂದೂಡಿದ್ದಾರೆ.
ಇತ್ತ ಲೋಕಸಭೆಯಲ್ಲೂ ಇದೇ ರೀತಿಯ ವಾತಾವರಣ ಕಂಡು ಬಂದಿದೆ. ಕೆಲವು ಸಂಸತ್ ಸದಸ್ಯರು ಸರಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದು, ಕಲಾಪಕ್ಕೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಕೆಳಮನೆಯ ಕಲಾಪವನ್ನು ಕೂಡ ಮುಂದೂಡಲಾಗಿದೆ.
ನಿಲುವಿನಿಂದ ಹಿಂದಕ್ಕೆ ಸರಿಯಲ್ಲ... ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತು ಶರದ್ ಯಾದವ್ ಇಂದು ಬೆಳಿಗ್ಗೆ ಭೇಟಿ ಮಾಡಿದ್ದು, ಮಹಿಳಾ ಮೀಸಲಾತಿ ಮಸೂದೆ ಸಂಬಂಧ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ, ರಾಷ್ಟ್ರೀಯ ಜನತಾದಳದ ಮುಖಂಡ ಲಾಲೂ ಮತ್ತು ಸಂಯುಕ್ತ ಜನತಾದಳದ ಮುಖಂಡ ಶರದ್ ಯಾದವ್ ಅವರು ಇಂದು ಪ್ರಧಾನಿಯವರನ್ನು ಭೇಟಿ ಮಾಡಿದರು.
ನಂತರ ಪ್ರತಿಕ್ರಿಯಿಸಿರುವ ಅವರು, ಯಾವುದೇ ಕಾರಣಕ್ಕೂ ಈಗ ಇರುವ ರೂಪದಲ್ಲಿ ಮಹಿಳಾ ಮಸೂದೆಯನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಒಂದು ವೇಳೆ ಸರಕಾರವು ಇಂದೇ ಮಸೂದೆಯನ್ನು ಮತಕ್ಕೆ ಹಾಕಲು ನಿರ್ಧರಿಸಿದರೆ ತಾವು ತೀವ್ರ ಗದ್ದಲ ಮಾಡುತ್ತೇವೆ ಎಂಬುದನ್ನೂ ಪ್ರಧಾನಿಯವರಿಗೆ ತಿಳಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ನಾವೇನೂ ಮಹಿಳಾ ಮೀಸಲಾತಿ ವಿರೋಧಿಗಳಲ್ಲ. ಆದರೆ ಈ ಮಸೂದೆಯಲ್ಲಿ ದಲಿತರು ಮತ್ತು ಮುಸ್ಲಿಮರ ಹಿತವನ್ನು ರಕ್ಷಿಸಲಾಗಿಲ್ಲ. ಹಾಗಾಗಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕನಿಷ್ಠ ಈ ಸಂಬಂಧ ನಡೆಯಲಿರುವ ಸರ್ವಪಕ್ಷಗಳ ಸಭೆಯವರೆಗೆ ಮಸೂದೆಯ ಮೇಲಿನ ಮತದಾನವನ್ನು ಮುಂದೂಡಬೇಕೆಂದು ನಾವು ಬಯಸುತ್ತಿದ್ದೇವೆ ಎಂದು ತಿಳಿಸಿದ್ದೇವೆ ಎಂದು ಲಾಲೂ ಪ್ರಸಾದ್ ವಿವರಣೆ ನೀಡಿದ್ದಾರೆ.