ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತ್ಯಾನಂದ ಸ್ವಾಮಿ ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ? (Paramahamsa Nithyananda Swami | Ranjitha | Sex scandal | Police)
Bookmark and Share Feedback Print
 
ಪರಮಹಂಸ ನಿತ್ಯಾನಂದ ಸ್ವಾಮಿ ಮತ್ತು ರಂಜಿತಾ ಕಾಮ ಪ್ರಕರಣ ಮತ್ತು ನಂತರದ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ ಅತ್ಯಾಚಾರ, ವಂಚನೆ, ಕೊಲೆಯತ್ನ ಮುಂತಾದ ಹತ್ತು ಹಲವು ಕ್ರಿಮಿನಲ್ ಪ್ರಕರಣಗಳನ್ನು ಕಳಂಕಿತ ಸ್ವಾಮೀಜಿ ಮೇಲೆ ದಾಖಲಿಸಲಾಗಿದ್ದರೂ ಇನ್ನೂ ಯಾಕೆ ಬಂಧಿಸಿಲ್ಲ ಎನ್ನುವುದರ ಹಿಂದೆ ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸಂಶಯಿಸಲಾಗುತ್ತಿದೆ.

ಸ್ವಾಮಿ ಎಲ್ಲಿ ಎಂಬುದು ಆಶ್ರಮಕ್ಕೆ ಗೊತ್ತಿದೆ...
ನಿತ್ಯಾನಂದ ಸ್ವಾಮಿ ಎಲ್ಲಿ ಅಡಗಿಕೊಂಡಿದ್ದಾರೆ ಎಂಬುದು ಧ್ಯಾನಪೀಠ ಸೇರಿದಂತೆ ಆಶ್ರಮವಾಸಿಗಳಿಗೆ ತಿಳಿದಿದೆ. ಅಂದರೆ ಅವರನ್ನು ವಿಚಾರಣೆ ನಡೆಸಿದಲ್ಲಿ ಸ್ವಾಮಿಯನ್ನು ಸುಲಭವಾಗಿಯೇ ಬಂಧಿಸಬಹುದು. ಆದರೆ ಪೊಲೀಸರು ಇದನ್ನು ಇನ್ನೂ ಮಾಡಿಲ್ಲ. ಪೊಲೀಸರ ಮೇಲೆ ರಾಜಕೀಯ ಒತ್ತಡವಿದೆಯೇ ಎಂಬ ಸಂಶಯವೀಗ ಸಾರ್ವಜನಿಕರದ್ದು.

ಇತ್ತೀಚೆಗಷ್ಟೇ ಆಶ್ರಮದ ವೆಬ್‌ಸೈಟಿನಲ್ಲಿ ಸ್ವಾಮಿಯ ವೀಡಿಯೋ ಹೇಳಿಕೆ ಹಾಕಲಾಗಿದೆ. ಈ ವೀಡಿಯೋವನ್ನು ಎಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ ಎಂಬುದು ಕೂಡ ಆಶ್ರಮಕ್ಕೆ ಗೊತ್ತಿರುತ್ತದೆ. ವೀಡಿಯೋವನ್ನು ಇಂಟರ್ನೆಟ್ಟಿನಲ್ಲಿ ಪೋಸ್ಟ್ ಮಾಡಿರುವುದು ಎಲ್ಲಿಂದ ಎಂಬುದನ್ನು ಐಪಿ ಮೂಲಕ ಪೊಲೀಸರು ಆಶ್ರಮವನ್ನು ಸಂಪರ್ಕಿಸದೇ ತಿಳಿದುಕೊಳ್ಳಲು ಸಾಧ್ಯವಿದೆ.
PR


ಸ್ವಾಮಿಯ ಪ್ರಮುಖ ಅಡ್ಡೆ ಬಿಡದಿ ಆಶ್ರಮದ ದೂರವಾಣಿಗಳ ಮೇಲೆ ಕಣ್ಣಿಟ್ಟರೂ ಅವರು ಎಲ್ಲಿ ಅಡಗಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಂಡು ಸುಲಭವಾಗಿ ಬಂಧಿಸಬಹುದು. ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ಹೊರತಾಗಿಯೂ ಸ್ವಾಮಿ ಹರಿದ್ವಾರದಲ್ಲಿದ್ದಾರೆ ಎಂದು ಆಶ್ರಮ ಬಹಿರಂಗವಾಗಿಯೇ ಹೇಳುತ್ತಿದೆ. ಅಲ್ಲದೆ ಸ್ವಾಮಿಗೆ ಸುಲಭವಾಗಿ ಎಲ್ಲೂ ಪರಾರಿಯಾಗಲು ಸಾಧ್ಯವಿಲ್ಲ. ಆದರೂ ಪೊಲೀಸರು ಕಾರ್ಯಪ್ರವೃತ್ತರಾಗಿಲ್ಲ.

ಸ್ವಾಮೀಜಿಯನ್ನು ಬಂಧಿಸುವುದು ಬೇಡವೆಂದೇ?
ಕೆಲವು ವರ್ಷಗಳ ಹಿಂದೆ ಕುಮಾರಿ ಜಯಲಲಿತಾ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಂಚಿ ಕಾಮಕೋಟಿ ಮಠದ ಶ್ರೀ ಜಯೇಂದ್ರ ಸರಸ್ವತಿಯವರನ್ನು ಬಂಧಿಸಿ ಸಾಕಷ್ಟು ವಿರೋಧವನ್ನು ಎದುರಿಸಿದ್ದಲ್ಲದೆ, ನಂತರದ ಚುನಾವಣೆಯಲ್ಲಿ ಸೋತ ಪ್ರಕರಣ ಕಣ್ಣ ಮುಂದಿದೆ. ಇದೇ ಕಾರಣಕ್ಕೆ ಲಕ್ಷಾಂತರ ಭಕ್ತರನ್ನು ಹೊಂದಿರುವ ಮತ್ತೊಬ್ಬ ಸ್ವಾಮೀಜಿಯನ್ನು ಬಂಧಿಸುವುದು ಬೇಡ ಎನ್ನುವುದು ಅಧಿಕಾರಾರೂಢರ ಯೋಚನೆ ಎಂದು ಹೇಳಲಾಗುತ್ತಿದೆ.

ಪ್ರಕರಣವನ್ನು ಕರ್ನಾಟಕಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದರೂ, ಇನ್ನೂ ಆ ಕೆಲಸ ನಡೆದಿಲ್ಲ. ಕರ್ನಾಟಕಕ್ಕೆ ಪ್ರಕರಣ ಹಸ್ತಾಂತರಗೊಂಡರೂ ಅಧಿಕಾರದಲ್ಲಿರುವುದು ಬಿಜೆಪಿ ಸರಕಾರವಾಗಿರುವ ಕಾರಣ ಸ್ವಾಮೀಜಿಯೊಬ್ಬರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಸ್ವಾಮಿಯನ್ನು ಬಂಧಿಸದೆ ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂಲಕ ಒಂದು ಹಂತದವರೆಗೆ ರಕ್ಷಣೆ ನೀಡುವುದು ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಸರಕಾರಗಳ ಉದ್ದೇಶ ಎಂಬುದು ಎದ್ದು ಕಾಣುತ್ತಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ.

ಆಶ್ರಮದಲ್ಲಿ ಕೊಲೆ ನಡೆದಿಲ್ಲ...
ಸ್ವಾಮೀಜಿಯವರು ಹರಿದ್ವಾರದಲ್ಲಿದ್ದಾರೆ. ಅವರಿಗೆ ಜೀವ ಬೆದರಿಕೆಯಿರುವ ಕಾರಣ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಶೀಘ್ರದಲ್ಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಬೆಂಗಳೂರಿನ ಬಿಡದಿ ಆಶ್ರಮದ ವಕ್ತಾರ ಸಚ್ಚಿದಾನಂದ ಎಂಬವರು ನಿನ್ನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಕೆನಡಾ ಮೂಲದ ಮೆಲ್ವಿನ್ ಬಾಯ್ಡ್ ಡೈಮಂಡ್ ಎಂಬ ಭಕ್ತನ ನಿಗೂಢ ಸಾವಿನಲ್ಲಿ ಆಶ್ರಮದ ಕೈವಾಡವಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಅವರು, ಡೈಮಂಡ್ ಸಾವು ಆಕಸ್ಮಿಕವಾಗಿತ್ತು; ಇದು ಮರಣೋತ್ತರ ಪರೀಕ್ಷೆಯಲ್ಲೂ ರುಜುವಾತಾಗಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ