ಇನ್ನು ಮುಂದಾದರೂ ಪ್ರಚೋದನಾಕಾರಿ ಭಾಷಣ ಮಾಡುವುದನ್ನು ನಿಲ್ಲಿಸಿ, ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡಿರಿ ಎಂದು ಎಂಎನ್‌ಎಸ್ ವರಿಷ್ಠ ರಾಜ್ ಠಾಕ್ರೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಸದಾ ಮರಾಠಿಯನ್ನೇ ಜಪಿಸುತ್ತಿದ್ದ ಠಾಕ್ರೆ ಹಿಂದಿಯಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.!
ಎಂಎನ್‌ಎಸ್ ಪಕ್ಷದ 4ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾತನಾಡಿದ ಠಾಕ್ರೆ, ನಾವೇನು ಹಿಂದಿ ವಿರೋಧಿಗಳಲ್ಲಿ. ಆದರೆ ಬಲವಂತವಾಗಿ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ ಎಂದು ಈ ಸಂದರ್ಭದಲ್ಲಿ ಹಿಂದಿಯಲ್ಲೇ ಮಾತನಾಡಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು.
ಏತನ್ಮಧ್ಯೆ ಮೊಬೈಲ್ ಪೂರೈಸುವ ಸಂಸ್ಥೆ ಏರ್‌ಟೆಲ್ ಮರಾಠಿ ಭಾಷೆಯಲ್ಲಿ ಘೋಷಣೆ ಮಾಡಲು ವಿಫಲವಾಗಿರುವುದನ್ನು ಖಂಡಿಸಿರುವ ಠಾಕ್ರೆ, ಸಂಸ್ಥೆಯ ಮೊಬೈಲ್ ಬಳಕೆಯನ್ನು ನಿಲ್ಲಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
'ನಾಲಿಗೆ ಮೇಲೆ ಹಿಡಿತವಿರಲಿ, ಇದು ಪ್ರಜಾಪ್ರಭುತ್ವ ಎಲ್ಲರಿಗೂ ಎಲ್ಲಾ ಕಡೆ ಬದುಕುವ ಹಕ್ಕಿದೆ. ನೀವು ನಿಮ್ಮದೆ ಸಿದ್ದಾಂತ ಇಟ್ಟುಕೊಂಡು ಎಷ್ಟು ದಿನ ಉತ್ತರ ಭಾರತೀಯರ ವಿರುದ್ಧ ಕೆಂಡಕಾರುತ್ತೀರಿ'?...ಹೀಗೆ ಎಂಎನ್‌ಎಸ್ ವರಿಷ್ಠ ರಾಜ್ ಠಾಕ್ರೆಗೆ ಸುಪ್ರೀಂಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತ್ತು.
ನೀವು ನೀಡುವ ಹೇಳಿಕೆಯಿಂದ ಸಮಾಜದಲ್ಲಿ ಗಲಭೆ ಸೃಷ್ಟಿಯಾಗುತ್ತೆ ಎನ್ನುವುದನ್ನು ಮರೆಯಬೇಡಿ. ಉತ್ತರ ಭಾರತೀಯರ ವಿರುದ್ಧ ನೀಡಿದ್ದ ಪ್ರಚೋದನಾಕಾರಿ ಹೇಳಿಕೆಯಿಂದ ಈಗಾಗಲೇ ಹಲವು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಇನ್ನು ಮುಂದಾದರೂ ಇಂತಹ ಬಾಯಿಬಡುಕತನದಿಂದ ದೂರವಿರಿ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತ್ತು.