ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಲವು ಪುರುಷ ಪುಡಾರಿಗಳಿನ್ನು ನಿರುದ್ಯೋಗಿಗಳಾಗಲಿದ್ದಾರೆ!
(Women's Reservation Bill | Parliament | India | Karnataka)
ರಾಜ್ಯದಲ್ಲಿನ್ನು 74 ಮಹಿಳಾ ಎಂಎಲ್ಎಗಳು, ಕೇಂದ್ರಕ್ಕೆ 180 ಎಂಪಿಗಳು!
ನವದೆಹಲಿ, ಬುಧವಾರ, 10 ಮಾರ್ಚ್ 2010( 11:02 IST )
ಹೌದು, ಪ್ರಸಕ್ತ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಮಹಿಳಾ ಮೀಸಲಾತಿ ಮಸೂದೆಯು ತನ್ನೆಲ್ಲಾ ವಿಘ್ನಗಳನ್ನು ದಾಟಿ ಶಾಸನ ರೂಪ ಪಡೆದುಕೊಂಡಲ್ಲಿ ಹಲವು ಪುರುಷ ರಾಜಕಾರಣಿಗಳು ನಿರುದ್ಯೋಗಿಗಳಾಗುತ್ತಾರೆ.
ನಮ್ಮ ದೇಶಕ್ಕೆ ಇಂದಿರಾ ಗಾಂಧಿ ಪ್ರಧಾನಿಯಾಗಿರಬಹುದು, ಪ್ರತಿಭಾ ಸಿಂಗ್ ಪಾಟೀಲ್ ರಾಷ್ಟ್ರಪತಿಯಾಗಿರಬಹುದು, ಕಾಂಗ್ರೆಸ್‌ಗೆ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿರಬಹುದು ಅಥವಾ ಲೋಕಸಭೆಯ ಪ್ರತಿಪಕ್ಷದ ನಾಯಕಿಯಾಗಿ ಸುಷ್ಮಾ ಸ್ವರಾಜ್ ಆಯ್ಕೆಯಾಗಿರಬಹುದು; ಮೀರಾ ಕುಮಾರ್ ಸ್ಪೀಕರ್ ಕೂಡ ಆಗಿರಬಹುದು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದು 63 ವರ್ಷಗಳೇ ಕಳೆದು ಹೋದರೂ ರಾಜಕಾರಣದಲ್ಲಿ ಮಹಿಳೆಗೆ ತನ್ನ ಪ್ರಭಾವವನ್ನು ಪುರುಷರಷ್ಟು ಪ್ರಮಾಣದಲ್ಲಿ ತೋರಿಸುವುದು ಇನ್ನೂ ಸಾಧ್ಯವಾಗಿಲ್ಲ ಎನ್ನುವುದು ನಿಜ.
ಈಗ ಬಹುತೇಕ ರಾಜಕಾರಣವೆಂದರೆ ಪುರುಷರು ಮತ್ತು ಪುರುಷರೆಂದರೇ ರಾಜಕಾರಣ ಎಂಬುದು ಜನಜನಿತ. ಅಲ್ಲಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿದರೂ ಗಂಡಂದಿರು ಅಥವಾ ಉಳಿದವರೇ ಅಧಿಕಾರ ನಡೆಸುವುದು ಹೆಚ್ಚು. ಎಲ್ಲವನ್ನೂ ಮೀರಿ ನಿಂತು ದಿಟ್ಟತನ ಪ್ರದರ್ಶಿಸುವ ಮಹಿಳಾ ರಾಜಕಾರಣಿಗಳನ್ನು ಮೂಲೆಗುಂಪು ಮಾಡಲು ಯತ್ನಿಸುವವರಿಗೂ ಕಡಿಮೆಯಿಲ್ಲ.
ಆದರೆ ನಮ್ಮದೇ ರಾಜ್ಯದಿಂದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರು ಚಾಲನೆ ನೀಡಿದ್ದ ಐತಿಹಾಸಿಕ ಮಸೂದೆಯೊಂದು ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ಇನ್ನು ಲೋಕಸಭೆಯಲ್ಲಿ, ನಂತರದ ಹಂತಗಳಲ್ಲಿ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ಅಂಗೀಕಾರ ಪಡೆದುಕೊಂಡಲ್ಲಿ ಇದು ಶಾಸನವಾಗಿ ಮಾರ್ಪಡಲಿದೆ.
ಹಾಗಾದಲ್ಲಿ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ಕಡ್ಡಾಯವಾಗುತ್ತದೆ. ಅಂದರೆ ಇದು ಜಾರಿಯಾದ ನಂತರದ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಗುವುದಂತೂ ಖಚಿತ. ಇದನ್ನು ಪ್ರಾಮಾಣಿಕತೆಯ ವಿಚಾರದಲ್ಲೂ ನಿರೀಕ್ಷಿಸಬಹುದಾಗಿದೆ.
ಈಗ ಲೋಕಸಭೆಯಲ್ಲಿರುವುದು ಶೇ.10.9 ಮಾತ್ರ! ಪ್ರಸಕ್ತ ಲೋಕಸಭೆಯ ಅಂಕಿ-ಅಂಶಗಳನ್ನೇ ಗಣನೆಗೆ ತೆಗೆದುಕೊಂಡರೂ ಒಟ್ಟು 543 ಸ್ಥಾನಗಳಲ್ಲಿ ಮಹಿಳೆಯರು ಹೊಂದಿರುವ ಸ್ಥಾನಗಳು ಕೇವಲ 59 ಮಾತ್ರ, ಅಂದರೆ ಶೇ.10.9. ಮಹಿಳಾ ಮೀಸಲಾತಿ ಜಾರಿಯಾದಲ್ಲಿ ಇದು 180ಕ್ಕೇರಲಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಈಗಿನ ಪರಿಸ್ಥಿತಿಯಲ್ಲಿ 121 ಸಂಸದರು ನಿರುದ್ಯೋಗಿಗಳಾಗುತ್ತಾರೆ!
ಇದನ್ನೇ ರಾಜ್ಯಸಭೆಯಲ್ಲಿ ನೋಡಿದಾಗ ಅಲ್ಲಿ ಈಗಿರುವಂತೆ ಒಟ್ಟು 233 (245 ಸದಸ್ಯಬಲಕ್ಕೆ ಅವಕಾಶ) ಸ್ಥಾನಗಳಲ್ಲಿ 77 ಸ್ಥಾನಗಳು ಮಹಿಳೆಯರ ಪಾಲಾಗುತ್ತದೆ. ರಾಜ್ಯಸಭೆಯಲ್ಲಿ ಪ್ರಸಕ್ತ ಇರುವ ಒಟ್ಟು ಮಹಿಳೆಯರ ಸಂಖ್ಯೆ ಅಲಭ್ಯ. ಆದರೂ ಇದು ಇದುವರೆಗೆ ಶೇ.11ಕ್ಕಿಂತ ಅಂದರೆ ಸುಮಾರು 26ಕ್ಕಿಂತ ಹೆಚ್ಚಿದ ಉದಾಹರಣೆಗಳಿಲ್ಲ.
ಮಹಿಳೆಯೇ ಮುಖ್ಯಮಂತ್ರಿಯೂ ಆಗಬಹುದು! ಇಡೀ ದೇಶದ 28 ರಾಜ್ಯಗಳ ವಿಧಾನಸಭೆಗಳ 4,109 ಶಾಸಕ ಸ್ಥಾನಗಳಲ್ಲಿ ಸರಿಸುಮಾರು 1,370 ಸ್ಥಾನಗಳು ಮಹಿಳೆಯರ ಪಾಲಾಗುತ್ತದೆ. ಅಂದರೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳಾಗಿ ಮಹಿಳಾಮಣಿಗಳೇ ಆಯ್ಕೆಯಾಗುವ ಅವಕಾಶಗಳಿವೆ.
224 ಸದಸ್ಯ ಬಲ ಹೊಂದಿರುವ ನಮ್ಮ ಕರ್ನಾಟಕ ರಾಜ್ಯ ವಿಧಾನಸಭೆಯನ್ನೇ ತೆಗೆದುಕೊಂಡರೆ, ಸಂಪೂರ್ಣ ಮೂಲೆಗುಂಪಾಗಿರುವ (ಕೇವಲ ಐದೇ ಮಂದಿ) ಮಹಿಳೆಯರ ಸಂಖ್ಯೆ ಶೇ.33ರ ಮಹಿಳಾ ಮೀಸಲಾತಿಯಿಂದಾಗಿ 74ಕ್ಕೇರುತ್ತದೆ. ಅರ್ಥಾತ್ ಶಾಸನ ಜಾರಿಯಾದರೆ ಈಗ ನಮ್ಮಲ್ಲಿ ಮೀಸೆ ತಿರುವುತ್ತಿರುವ ಹಲವು ಶಾಸಕರು ಮೂಲೆಗುಂಪಾಗುತ್ತಾರೆ.
ಈಗ ಕರ್ನಾಟಕದಲ್ಲಿ ಶಾಸಕಿಯಾಗಿರುವವರು ಶೋಭಾ ಕರಂದ್ಲಾಜೆ, ಸೀಮಾ ಮಸೂತಿ, ಮಲ್ಲಿಕಾ ಪ್ರಸಾದ್, ಅನಿತಾ ಕುಮಾರಸ್ವಾಮಿ, ಕಲ್ಪನಾ ಸಿದ್ದರಾಜು ಮಾತ್ರ. ಇವರಲ್ಲಿ ಮೂವರು ಬಿಜೆಪಿಯವರಾಗಿದ್ದರೆ, ಇದೀಗ ಮುಸ್ಲಿಂ ಮಹಿಳೆಯೂ ಒಳ ಮೀಸಲಾತಿ ಕಲ್ಪಿಸಬೇಕೆಂದು ತಗಾದೆ ತೆಗೆದಿರುವ ದೇವೇಗೌಡರ, ತೆನೆ ಹೊತ್ತ ಮಹಿಳೆಯ ಚಿಹ್ನೆಯನ್ನೇ ಹೊಂದಿರುವ ಜೆಡಿಎಸ್‌ಗೆ ಎರಡು ಸ್ಥಾನವಿದೆ. ಆದರೆ ಇಂತಹ ಶಾಸನವನ್ನು ಜಾರಿಗೆ ತರಲು ಶತಪ್ರಯತ್ನ ನಡೆಸಿದ ಕಾಂಗ್ರೆಸ್ ಒಂದೂ ಮಹಿಳಾ ಶಾಸಕರನ್ನು ಹೊಂದಿಲ್ಲದಿರುವುದು ದುರದೃಷ್ಟಕರ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವು ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಸೋಲನುಭವಿಸಬೇಕಾಗಿತ್ತು. ಅದಕ್ಕೆ ಕಾರಣ ಅವರೆದುರಿದ್ದ ಪ್ರಭಾವಿ ಪುರುಷ ರಾಜಕಾರಣಿಗಳು. ಪ್ರಮೀಳಾ ನೇಸರ್ಗಿ, ಮಮತಾ ನಿಚ್ಚಾನಿ, ಉಮಾಶ್ರೀ, ಪರಿಮಳಾ ನಾಗಪ್ಪ, ವಿದ್ಯಾ ನಾಗೇಂದ್ರ, ಮಂಗಳಾ ಬಿರದಾರ್, ವಿಮಲಾಭಾಯಿ ದೇಶಮುಖ್, ಅನುಪಮಾ ಎಸ್.ಜಿ. ಮುಂತಾದವರು ಸೋಲುಂಡಿದ್ದರು.
ಮಹಿಳಾ ಮೀಸಲಾತಿ ಜಾರಿಯಾದರೆ ಮೀಸಲಾತಿ ಕ್ಷೇತ್ರದಲ್ಲಿ ಎದುರಾಳಿಗಳೂ ಮಹಿಳೆಯರೇ ಆಗಿರುವುದರಿಂದ ಪುರುಷರ ಪ್ರಭಾವ ಮತ್ತು ಇತರ ಹಸ್ತಕ್ಷೇಪಗಳ ಭಯವನ್ನು ಮಹಿಳಾ ರಾಜಕಾರಣಿಗಳು ಬಿಡಬಹುದಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಮಹಿಳಾ ರಾಜಕಾರಣಿಗಳನ್ನು ನಿರೀಕ್ಷಿಸಬಹುದು.
ಕರ್ನಾಟಕ ವಿಧಾನಪರಿಷತ್ತಿನಲ್ಲಿ ಪ್ರಸಕ್ತ 75 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶಗಳಿದ್ದು, ಮೀಸಲಾತಿ ಪ್ರಕಾರ 25 ಮಹಿಳಾ ಅಭ್ಯರ್ಥಿಗಳಿರುವುದು ಕಡ್ಡಾಯವಾಗಲಿದೆ. ಹಾಗಾಗಿ ಬುದ್ಧಿಜೀವಿಗಳೆಂದರೆ, ಶಿಕ್ಷಕರೆಂದರೆ ಕೇವಲ ಪುರುಷರು ಮಾತ್ರವಲ್ಲ ಎಂಬುದನ್ನು ಇಲ್ಲೂ ಮಹಿಳೆಯರಿಗೆ ನಿರೂಪಿಸಲು ಸಿಗುವ ಅವಕಾಶವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಾಗುವುದಿಲ್ಲ.
ಹಾಗಿದ್ದರೆ ಈ ವಿಧೇಯಕಕ್ಕೆ ಶಾಸನ ರೂಪ ಸಿಗಲು ನಮ್ಮ ರಾಜಕಾರಣಿಗಳು ಬಿಡುವರೇ? ಎಲ್ಲಾ ವಿಘ್ನಗಳನ್ನೂ ದಾಟಿ ಮಸೂದೆ ಶಾಸನವಾಗಬಹುದೇ?