ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಿಳಾ ವಿಧೇಯಕಕ್ಕೆ ಕಾಂಗ್ರೆಸ್, ಬಿಜೆಪಿಯೊಳಗೇ ಭಿನ್ನರಾಗ..! (BJP | Women's Reservation Bill | Lok Sabha | Sushma Swaraj)
Bookmark and Share Feedback Print
 
ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಶತಯತ್ನ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಗಳಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ಲೋಕಸಭೆಯಲ್ಲಿ ಬಹಿರಂಗಪಡಿಸಿದ್ದು ರಾಷ್ಟ್ರೀಯ ಜನತಾದಳ ಮುಖಂಡ ಲಾಲೂ ಪ್ರಸಾದ್ ಯಾದವ್.

ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆಗೆ ಜಾರಿಗೆ ಬರಲಿರುವ ಮೀಸಲಾತಿ ವಿಧೇಯಕದಿಂದಾಗಿ ಈಗ ಅಧಿಕಾರ ಅನುಭವಿಸುತ್ತಿರುವ ಹಲವು ಪುರುಷ ಸಂಸದರು ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಇದನ್ನು ಆತ್ಮಹತ್ಯೆ ಮತ್ತು ಬಲಿದಾನಕ್ಕೆ ಹೋಲಿಸಿರುವ ಸದಸ್ಯರು, ತಾವು ಪಕ್ಷಗಳ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತೇವೆ ಎಂದೂ ಬೆದರಿಕೆ ಹಾಕಿದ್ದಾರೆ.

ಇಂದು ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಲಾಲೂ ಪ್ರಸಾದ್ ಯಾದವ್, ಮಸೂದೆಯನ್ನು ಬೆಂಬಲಿಸುತ್ತೇವೆ ಎಂದು ಹೇಳುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಗಳ ಒಳಗೆ ಇದಕ್ಕೆ ಸಾಕಷ್ಟು ವಿರೋಧವಿದೆ. ಇಂತಹ ಸಾಕಷ್ಟು ವಿರೋಧಾಭಾಸಗಳನ್ನು ಹೊಂದಿರುವ ಮಸೂದೆಯಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರಿಗೂ ಒಳ ಮೀಸಲಾತಿ ನೀಡಿದರಷ್ಟೇ ನ್ಯಾಯಸಮ್ಮತ ಕಾಯ್ದೆಯಾಗಿ ಹೊರಬರಲು ನಾವು ಸಹಕರಿಸುತ್ತೇವೆ ಎಂದಿದ್ದಾರೆ.

ಇನ್ನೇನು ಲೋಕಸಭೆಯಲ್ಲಿ ಮಂಡನೆಯಾಗಲಿರುವ ವಿಧೇಯಕದ ವಿರುದ್ಧ ತಾವು ಮತ ಹಾಕುತ್ತೇವೆ ಎಂದು ಕೆಲವರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿಪ್ ಜಾರಿಗೊಳಿಸಲು ನಿರ್ಧರಿಸಿದ್ದು, ಪಕ್ಷದಲ್ಲಿ ಮತ್ತೆ ಒಡಕು ಸೃಷ್ಟಿಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ.

ರಾಜ್ಯಸಭೆಯಲ್ಲಿ ಬಿಜೆಪಿಯ ಸಂಪೂರ್ಣ ಸಹಕಾರದೊಂದಿಗೆ ಅಂಗೀಕಾರ ಪಡೆದುಕೊಂಡಿರುವ ಮಹಿಳಾ ಮೀಸಲಾತಿ ಮಸೂದೆಯು ಶಾಸನವಾಗಲು ಸಹಕರಿಸಿದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳು ಮಹಿಳೆಯರ ಪಾಲಾಗುತ್ತದೆ. ಇದು ಬಿಜೆಪಿಯೊಳಗೆ ಅಸಮಾಧಾನಕ್ಕೆ ಕಾರಣವಾಗಿದ್ದು, ಕೆಲವು ಸಂಸದರು ಬಿಜೆಪಿ ಹಾಗೂ ಮಸೂದೆಯನ್ನು ಧಿಕ್ಕರಿಸುವ ಸೂಚನೆಗಳನ್ನು ನೀಡಿದ್ದಾರೆ.

ಈ ಸಂಬಂಧ ಭಾರೀ ನಷ್ಟ ಹಾಗೂ ಅವಮಾನವನ್ನು ತಪ್ಪಿಸುವ ಸಲುವಾಗಿ ಬಿಜೆಪಿಯ ಅಗ್ರ ನಾಯಕತ್ವವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಲು ನಿರ್ಧರಿಸಿದೆ. ಲೋಕಸಭೆಯಲ್ಲಿ ಮಾರ್ಚ್ 16ರೊಳಗೆ ಮಸೂದೆಯನ್ನು ಮಂಡಿಸಲಾಗುತ್ತದೆ. ಈ ಸಂದರ್ಭದಲ್ಲಿ ತನ್ನ ಸದಸ್ಯರು ತಿರುಗಿ ಬೀಳದಂತೆ ನೋಡಿಕೊಳ್ಳುವ ಕೆಲಸಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಮತ್ತು ಪಕ್ಷದ ಮಾಜಿ ಮುಖ್ಯಸ್ಥ ರಾಜನಾಥ್ ಸಿಂಗ್ ಕೈ ಹಾಕಿದ್ದು, ಅತೃಪ್ತ ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗುವ ಮೊದಲು ನಾವು ಪಕ್ಷದ ಸಂಸದರಿಗೆ ವಿಪ್ ಜಾರಿ ಮಾಡುತ್ತೇವೆ ಎಂದು ಸ್ವರಾಜ್ ಪಕ್ಷದ ಸಭೆಯ ನಂತರ ಪ್ರತಿಕ್ರಿಯೆ ನೀಡಿದ್ದಾರೆ.

ಗೋರಖ್‌ಪುರದ ಯೋಗಿ ಅದಿತ್ಯನಾಥ್, ಮಾಜಿ ಕೇಂದ್ರ ಸಚಿವ ಹುಕುಂದೇವೋ ನಾರಾಯಣ್ ಯಾದವ್, ಪಕ್ಷದ ಹಿರಿತಲೆ ರಮೇಶ್ ಬಯಾಸ್ ಮುಂತಾದವರು ವಿರೋಧಿಸುತ್ತಿರುವ ಸಂಸದರಲ್ಲಿ ಪ್ರಮುಖರು.

ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗುವ ಸಂದರ್ಭದಲ್ಲಿ ತಾವು ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಮತ ಹಾಕಲಿದ್ದೇವೆ. ನನ್ನ ಪ್ರಕಾರ ಇದು ಆತ್ಮಹತ್ಯೆ ಮತ್ತು ಬಲಿದಾನ -- ಇವೆರಡರ ನಡುವಿನ ಆಯ್ಕೆ ನಮಗಿದೆ. ಅದರಲ್ಲಿ ನನ್ನ ಆಯ್ಕೆ ಬಲಿದಾನವೇ ಆಗಿರುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಸಂಸದರೊಬ್ಬರು ಹೇಳಿಕೊಂಡಿದ್ದಾರೆ.

ಸ್ವತಃ ನಮಗೆ ಮರಣ ದಂಡನೆ ವಿಧಿಸಿಕೊಳ್ಳುವ ಕಾಯ್ದೆಯಿದು. ಇದಕ್ಕೆ ಪರವಾಗಿ ನಾವು ಮತ ಚಲಾಯಿಸಿದಲ್ಲಿ ಅದು ಆತ್ಮಹತ್ಯೆಯೆನಿಸಿಕೊಳ್ಳುತ್ತದೆ. ಅದನ್ನು ವಿರೋಧಿಸಿ ಹೋರಾಡಿದರೆ ಕನಿಷ್ಠ ಹುತಾತ್ಮರೆಂಬ ಪಟ್ಟವಾದರೂ ಸಿಕ್ಕೀತು ಎಂದು ಕೆಲವು ಬಿಜೆಪಿ ಸಂಸದರ ಅಭಿಪ್ರಾಯ.
ಸಂಬಂಧಿತ ಮಾಹಿತಿ ಹುಡುಕಿ