ಗುಜರಾತ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೇಮಕಗೊಳಿಸಿರುವ ವಿಶೇಷ ತನಿಖಾ ದಳವು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ನೊಟೀಸ್ ಜಾರಿ ಮಾಡಿದ್ದು, ವಿಚಾರಣೆಗಾಗಿ ಮಾರ್ಚ್ 21ಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ.
ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿ ಸಾಮೂಹಿಕ ಹತ್ಯಾಕಾಂಡದಲ್ಲಿ ಮೃತರಾಗಿದ್ದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಾಕಿಯಾ ಜಾಫ್ರಿಯವರು ಸಲ್ಲಿಸಿದ ಅರ್ಜಿಗೆ ಸಂಬಂಧಪಟ್ಟಂತೆ ಮೋದಿಯವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೋದಿಯವರ ವಿರುದ್ಧ ಸಿಟ್ ಸಾಕಷ್ಟು ನಂಬಲರ್ಹ ಸಾಕ್ಷ್ಯಗಳನ್ನು ಕಲೆ ಹಾಕಿದೆ ಎಂದು ವರದಿಗಳು ಹೇಳಿವೆ.
ಈ ಸಂಬಂಧ ವಾರ್ತಾವಾಹಿನಿಯೊಂದಿಗೆ ಮಾತನಾಡಿರುವ ಸಿಟ್ ಮುಖ್ಯಸ್ಥ ಕೆ.ಕೆ. ರಾಘವನ್, ಜಾಫ್ರಿ ಹತ್ಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತ್ರ ಮೋದಿಯವರಿಗೆ ನೊಟೀಸ್ ಜಾರಿ ಮಾಡಲಾಗಿದೆಯೇ ಹೊರತು, ಗುಜರಾತ್ ಗಲಭೆಗಳಿಗೆ ಸಂಬಂಧಪಟ್ಟಂತೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗುಲ್ಬರ್ಗ್ ಸೊಸೈಟಿ ಬಳಿ ನಡೆದಿದ್ದ ಈ ಗಲಭೆಯಲ್ಲಿ ಆಕ್ರೋಶಿತ ಗುಂಪು ಜಾಫ್ರಿಯವರನ್ನು ಹತ್ಯೆಗೈದಿತ್ತು. ಇಲ್ಲಿನ ಗಲಭೆಗೆ ಮುಖ್ಯಮಂತ್ರಿ, ಸಂಪುಟ ಸಚಿವರು, ಪೊಲೀಸ್ ಮತ್ತು ಇತರ ಅಧಿಕಾರಿಗಳು ಬೆಂಬಲ ನೀಡಿದ್ದರು; ಆ ಮೂಲಕ ಜಾತಿ-ಮತ ಭೇದವಿಲ್ಲದೆ ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣೆ ಮಾಡುವ ಸಾಂವಿಧಾನಿಕ ಕರ್ತವ್ಯವನ್ನು ಮಾಡಿಲ್ಲ ಎಂದು ಆರೋಪಿಸಲಾಗಿದೆ.