ಮಹಿಳೆಯ ಬಹುತೇಕ ನಗ್ನವಾಗಿದ್ದ ಅಶ್ಲೀಲ ದೃಶ್ಯ ಮತ್ತು ಕೀಳಭಿರುಚಿಯ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಮೂಲಕ ಕಾನೂನನ್ನು ಉಲ್ಲಂಘಿಸಿದ ಎಫ್‌ಟಿವಿ ಮೇಲೆ ಭಾರತ ಸರಕಾರ ಒಂಬತ್ತು ದಿನಗಳ ನಿಷೇಧ ಹೇರಿದೆ.
ಫ್ಯಾಷನ್ ಟಿವಿ ಪ್ರಸಾರವನ್ನು ಮಾರ್ಚ್ 12ರ ರಾತ್ರಿ ಏಳು ಗಂಟೆಯಿಂದ ಮಾರ್ಚ್ 21ರ ರಾತ್ರಿ ಏಳು ಗಂಟೆಯವರೆಗೆ ನಿಷೇಧಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2009ರ ಸೆಪ್ಟೆಂಬರ್ 4ರಂದು ಎಫ್‌ಟಿವಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಇದರಲ್ಲಿ ಮಹಿಳೆಯೊಬ್ಬಳ ದೇಹದ ಮೇಲಿನ ಭಾಗವನ್ನು ಸಂಪೂರ್ಣವಾಗಿ ನಗ್ನವಾಗಿಯೇ ಪ್ರಸಾರ ಮಾಡಲಾಗಿತ್ತು. ಇದು ಅತ್ಯುತ್ತಮ ಅಭಿರುಚಿ ಮತ್ತು ಸಭ್ಯತೆಗೆ ವಿರುದ್ಧವಾದದ್ದು ಎಂದು ಸಚಿವಾಲಯ ತಿಳಿಸಿದೆ.
ಟಿವಿ ಪ್ರಸಾರ ಮಾಡಿರುವ ದೃಶ್ಯಗಳು ಅಶ್ಲೀಲವಾಗಿದ್ದು, ಮಹಿಳೆಯ ಘನತೆಯನ್ನು ಮಣ್ಣುಪಾಲು ಮಾಡುವ ಉದ್ದೇಶದಿಂದ ಕೂಡಿತ್ತು ಮತ್ತು ಇದು ಮಕ್ಕಳು ಮತ್ತು ಸಾರ್ವಜನಿಕರಿಗೆ ವೀಕ್ಷಿಸಲು ನಿರ್ಬಂಧ ವಿಧಿಸುವಂತಹ ಕಾರ್ಯಕ್ರಮವಾಗಿತ್ತು ಎಂದು ಸರಕಾರ ತನ್ನ ಹೇಳಿಕೆಯಲ್ಲಿ ವಿವರಣೆ ನೀಡಿದೆ.
ಸರಕಾರವು ಈ ಚಾನೆಲ್ ವಿರುದ್ಧ ನಿಷೇಧ ಹೇರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 'ಮಿಡ್‌ನೈಟ್ ಹಾಟ್' ಹೆಸರಿನಲ್ಲಿ ಚಿಕ್ಕ ದಿರಿಸು ಮತ್ತು ಅರೆನಗ್ನ ಮಾಡೆಲ್‌ಗಳನ್ನು ತೋರಿಸಿದ ಆಪಾದನೆ ಮೇಲೆ 2007ರ ಏಪ್ರಿಲ್ 1ರಿಂದ ಮೇ 30ರವರೆಗೆ ನಿಷೇಧ ಹೇರಲಾಗಿತ್ತು.
ಆದರೆ 2007ರ ಮೇ 25ರಂದು ಈ ಚಾನೆಲ್ ಕ್ಷಮೆ ಯಾಚಿಸಿದ್ದಲ್ಲದೆ, ಇಂತಹ ಪ್ರಮಾದಗಳು ಮುಂದೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದ ನಂತರ ನಿಷೇಧವನ್ನು ತೆರವುಗೊಳಿಸಲಾಗಿತ್ತು.