ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಎಂಸಿ ಮೈನಿಂಗ್: ಗಣಿಗಾರಿಕೆ ಸ್ಥಗಿತಕ್ಕೆ ಸುಪ್ರೀಂ ಆದೇಶ (OMC | Janardana Reddy | Supreme court | Karnataka | Andhra)
ಕರ್ನಾಟಕದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ(ಓಎಂಸಿ) ಸೇರಿದಂತೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಆರು ಗಣಿಗಳಿಂದ ಕಬ್ಬಿಣ ಅದಿರು ತೆಗೆಯುವ ಮತ್ತು ಸಾಗಿಸುವ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ.
ಆಂಧ್ರಪ್ರದೇಶ ಹಾಗೂ ಗಣಿ ಕಂಪನಿಗಳು ಸೇರಿದಂತೆ ಈ ಪ್ರಕರಣಗಳಲ್ಲಿ ವಾದಿ, ಪ್ರದಿವಾದಿಗಳಾಗಿರುವ ಎಲ್ಲರೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ಸಂರಕ್ಷಿತ ಅರಣ್ಯದಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ಕಲ್ಪಿಸಿ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಆಂಧ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ಪರಿಶೀಲನೆ ನಡೆಸಿದ ಸುಪ್ರೀಂಪೀಠ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ.