ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ 'ಭಾರತ ರತ್ನ' ನೀಡಬೇಕು ಎಂದು ಆಂಧ್ರಪ್ರದೇಶ ಮಹಿಳಾ ಕಾಂಗ್ರೆಸ್ ಘಟಕ ಒತ್ತಾಯಿಸಿದ ಬೆನ್ನಿಗೆ ಕೇರಳದ ಆನ್‌ಲೈನ್ ಸಮೀಕ್ಷೆಯೊಂದು ಅವರನ್ನು 'ದಶಕದ ಮಹಿಳೆ' ಎಂದು ಹೆಸರಿಸಿದೆ.
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ಒದಗಿಸುವ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದ್ದು, ಇದರ ಹಿಂದೆ ಸೋನಿಯಾ ಅವರ ಪಾಲನ್ನು ದೇಶದಾದ್ಯಂತ ಭಾರೀ ಮಟ್ಟದಲ್ಲಿ ಶ್ಲಾಘಿಸಲಾಗುತ್ತಿದೆ.
ವಿಶ್ವ ಮಹಿಳೆಯರ ದಿನದ ಅಂಗವಾಗಿ ಮಲಯಾಳಂ ದಿನಪತ್ರಿಕೆ 'ಮಾತೃಭೂಮಿ' ತನ್ನ ಮಹಿಳಾ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಈ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಸೋನಿಯಾ ಗಾಂಧಿಯವರನ್ನು 'ದಶಕದ ನಾರಿ' ಎಂದು ಘೋಷಿಸಲಾಗಿದೆ.
ಪತ್ರಿಕೆಯ 'mb4eves' ಡಾಟ್ ಕಾಮ್ ಎಂಬ ವೆಬ್‌ಸೈಟ್ ದೇಶದ ಅಗ್ರ ಸಾಧನೆಗೈದ ಮಹಿಳೆಯರನ್ನು ಗುರುತಿಸಲು ಈ ಸಮೀಕ್ಷೆಯನ್ನು ನಡೆಸಿತ್ತು.
ಇಲ್ಲಿ ಶೇ.53ರಷ್ಟು ಮತಗಳನ್ನು ಸೋನಿಯಾ ಗಾಂಧಿ ಪಡೆದರೆ, ನಂತರದ ಸ್ಥಾನ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪ್ಲಾಚಿಂದಾದಲ್ಲಿ ಭೂಗರ್ಭದ ನೀರನ್ನು ತಂಪುಪಾನೀಯ ಕಂಪನಿ ಕೋಕಾ ಕೋಲಾ ಬಳಸುವುದರ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದ ಮಾಯಿಲಮ್ಮಾ ಅವರಿಗೆ ಲಭಿಸಿದೆ.
ಮಾಯಿಲಮ್ಮಾ ಶೇ.13ರಷ್ಟು ಮತ್ತು ಭಾರತ-ಅಮೆರಿಕನ್ ಬಾಹ್ಯಾಕಾಶ ವಿಜ್ಞಾನಿ ಸುನೀತಾ ವಿಲಿಯಮ್ಸ್ ಶೇ.9ರ ಮತಗಳೊಂದಿಗೆ ನಂತರದ ಸ್ಥಾನಗಳನ್ನು ಪಡೆದಿದ್ದಾರೆ ಎಂದು ವೆಬ್‌ಸೈಟ್ ತಿಳಿಸಿದೆ.
ಮಣಿಪುರದ ಉಕ್ಕಿನ ಮಹಿಳೆ ಎಂಬ ಖ್ಯಾತಿ ಇರೋಮ್ ಶರ್ಮಿಲಾ ಶೇ.8.5, ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಶೇ.6ರಷ್ಟು ಮತಗಳೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಶೇ.4, ಬಾಲಿವುಡ್ ತಾರೆ ಐಶ್ವರ್ಯಾ ರೈ ಶೇ.3, ಟೆನಿಸ್ ತಾರೆ ಸಾನಿಯಾ ಮಿರ್ಜಾ ಶೇ.2, ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಶೇ.1.5, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಶೇ.0.5 ಹಾಗೂ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಶೇ.0.5ರಷ್ಟು ಮತಗಳನ್ನು ಪಡೆದಿದ್ದಾರೆ.