ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಟ್ಲಾ ಭಯೋತ್ಪಾದಕರಿಗೆ ಹಣ ನೀಡಿದ್ದು ಕಾಂಗ್ರೆಸ್ ನಾಯಕ!
(Azamgarh MLA | Indian Mujahideen | Batla House | Abdus Salam)
ಬಾಟ್ಲಾ ಹೌಸ್ ಎನ್‌ಕೌಂಟರ್ ನಂತರ ಪರಾರಿಯಾಗಿದ್ದ ಇಂಡಿಯನ್ ಮುಜಾಹಿದೀನ್‌ನ ಇಬ್ಬರು ಶಂಕಿತ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ್ದು ಉತ್ತರ ಪ್ರದೇಶದ ಕಾಂಗ್ರೆಸ್ ಮಾಜಿ ಶಾಸಕ ಎಂಬುದು ಬಹಿರಂಗವಾಗಿದೆ.
ಉಗ್ರರಿಗೆ ಆರ್ಥಿಕ ಬೆಂಬಲ ನೀಡಿದ್ದು ಉತ್ತರ ಪ್ರದೇಶದ ಮಾಜಿ ಶಾಸಕ ಎಂದು ಈ ಹಿಂದೆಯೇ ಹೇಳಲಾಗಿತ್ತಾದರೂ, ಅವರ ಹೆಸರು ಅಥವಾ ಯಾವ ಪಕ್ಷದವರು ಎಂದು ಪೊಲೀಸ್ ಮೂಲಗಳು ಹೇಳಿರಲಿಲ್ಲ. ಆದರೆ ಈಗ ಅವರು ಉತ್ತರ ಪ್ರದೇಶದ ಅಜಂಗಢದ ಕಾಂಗ್ರೆಸ್ ಮಾಜಿ ಶಾಸಕ ಅಬ್ದುಸ್ ಸಲಾಂ ಎಂಬುದು ತಿಳಿದು ಬಂದಿದೆ.
ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿರುವುದನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಮಾಜಿ ಶಾಸಕ, ತನಗೆ ಅವರು ಉಗ್ರರು ಎಂದು ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
2008ರ ಸೆಪ್ಟೆಂಬರ್ 19ರಂದು ನಾನು ನೋಯ್ಡಾ ಸೆಕ್ಟರ್ 44ನಲ್ಲಿನ 'ಸಾಬಾ ಅಪಾರ್ಟ್‌ಮೆಂಟ್'ನಲ್ಲಿದ್ದಾಗ ಸಂಜೆ 4.30ರ ಹೊತ್ತಿಗೆ ಜುನೈದ್ ಆಲಿಯಾಸ್ ಹ್ಯಾರಿಸ್ ಎಂಬಾತನು ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಬಂದಿದ್ದ. ಅವರು ದಕ್ಷಿಣ ದೆಹಲಿಯಲ್ಲಿನ ಬಾಟ್ಲಾ ಹೌಸ್ ಎನ್‌ಕೌಂಟರಿನಲ್ಲಿ ಅಥವಾ ಸ್ಫೋಟದಲ್ಲಿ ಪಾಲ್ಗೊಂಡಿದ್ದರೆಂದು ನನಗೆ ತಿಳಿದಿರಲಿಲ್ಲ ಎಂದು ಸಲಾಂ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜುನೈದ್‌ಗೆ ಮಾಜಿ ಶಾಸಕ ಸಲಾಂ 1,500 ರೂಪಾಯಿಗಳನ್ನು ನೀಡಿದ್ದರು. ಅವನೊಂದಿಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಅದಕ್ಕೂ ಮೊದಲು ಮಾಜಿ ಶಾಸಕರು ಭೇಟಿಯಾಗಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದು, ಜುನೈದ್ ಕೂಡ ತನ್ನ ಹೆಸರನ್ನು ಪಪ್ಪು ಎಂದು ಹೇಳಿಕೊಂಡಿದ್ದ ಎಂದಿದ್ದಾರೆ.
ಇತ್ತೀಚೆಗಷ್ಟೇ ಬಂಧಿಸಲ್ಪಟ್ಟಿದ್ದ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಶಾಹ್ಜಾದ್ ಹಲವು ರಾಜಕಾರಣಿಗಳು ತಮಗೆ ಸಹಾಯ ಮಾಡಿರುವುದನ್ನು ಪೊಲೀಸರಲ್ಲಿ ಬಾಯ್ಬಿಟ್ಟಿದ್ದ. ಆದರೆ ಪೊಲೀಸರು ರಾಜಕಾರಣಿಗಳ ಹೆಸರುಗಳನ್ನು ಬಹಿರಂಗಪಡಿಸಿರಲಿಲ್ಲ.
'ನನ್ನ ಗೆಳೆಯನ ಅಳಿಯನಾಗಿದ್ದ ಕಾರಣ ನನಗೆ ಹ್ಯಾರಿಸ್ ಪರಿಚಯವಿತ್ತು. ಆತ ನನ್ನನ್ನು ಅಂಕಲ್ ಎಂದೇ ಕರೆಯುತ್ತಿದ್ದ. ಆತನ ಜತೆ ಬಂದಿದ್ದ ಮತ್ತೊಬ್ಬ ವ್ಯಕ್ತಿಯ ಪರಿಚಯ ನನಗಿರಲಿಲ್ಲ. ಪೊಲೀಸರ ಪ್ರಕಾರ ಆತ ಶಾಹ್ಜಾದ್' ಎಂದು ಸಲಾಂ ಹೇಳಿದ್ದಾರೆ.
ಕಾಂಗ್ರೆಸ್ ನಾಯಕನ ಪ್ರಕಾರ ಜುನೈದ್ ತನಗೆ ಮನೆಗೆ ಹೋಗಲು ಹಣ ಬೇಕೆಂದು ಅವರಲ್ಲಿ ಕೇಳಿದ್ದ. ಆಗ ತಾನು 1,400-1,500 ರೂಪಾಯಿಗಳನ್ನು ಆತನಿಗೆ ನೀಡಿದ್ದೆ ಎಂದು ತಿಳಿಸಿದ್ದಾರೆ.
ತನಗೆ ಜುನೈದ್ ಮತ್ತು ಶಾಹ್ಜಾದ್ ದೆಹಲಿ ಸ್ಫೋಟದಲ್ಲಿ ಪಾಲ್ಗೊಂಡಿದ್ದ ವಿಚಾರ ತಿಳಿದಿರಲಿಲ್ಲ ಎಂದು ಒಂದು ಕಡೆ ಹೇಳುವ ಕಾಂಗ್ರೆಸ್ ನಾಯಕ ಸಲಾಂ, ಮತ್ತೊಂದು ಕಡೆ ಬಾಟ್ಲಾ ಹೌಸ್ ಎನ್‌ಕೌಂಟರ್ ನಕಲಿ ಎಂದೂ ವಾದಿಸುತ್ತಿದ್ದಾರೆ.
ಈ ಸಂಬಂಧ ತಾನು ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದು, ನ್ಯಾಯಾಂಗ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಸಲಾಂ ಹೇಳಿದ್ದಾರೆ.