ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನು ಯಾವುದೇ ಪ್ರಯೋಗ ಮಾಡಲಾರೆ: ನಿತ್ಯಾನಂದ ಸ್ವಾಮಿ (Paramahamsa Nithyananda Swami | Ranjitha | Tamil Actress | Bidadi)
Bookmark and Share Feedback Print
 
ತಮಿಳು ನಟಿಯ ಜತೆಗಿನ ರಾಸಲೀಲೆ ಸೃಷ್ಟಿಸಿದ ವೀಡಿಯೋ ಸಂಬಂಧ ಮೊತ್ತ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಪರಮಹಂಸ ನಿತ್ಯಾನಂದ ಸ್ವಾಮಿ, ಈ ವೀಡಿಯೋ ಪ್ರಕರಣವು ನನಗೊಂದು ಪಾಠ ಕಲಿಸಿದೆ, ಜನರಿಗೆ ಸ್ವೀಕಾರಾರ್ಹವಲ್ಲದ ಯಾವುದೇ ಕಾರ್ಯಗಳನ್ನು ಪ್ರಯೋಗವನ್ನು ಇನ್ನು ಮಾಡದಿರಲು ನಿರ್ಧರಿಸಿದ್ದೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಸಂಶೋಧಕ ಎಂದು ಹೇಳಿಕೊಂಡಿರುವ ರಾಜೀವ್ ಮಲ್ಹೋತ್ರಾ ಎಂಬ ವ್ಯಕ್ತಿಯ ಜತೆ ಎರಡನೇ ಬಾರಿ ಹಾಗೂ ಯೂಟ್ಯೂಬ್ ವೀಡಿಯೋ ಮೂಲಕ ಮೂರನೇ ಬಾರಿ ಕಾಣಿಸಿಕೊಂಡಿರುವ ನಿತ್ಯಾನಂದ ಸ್ವಾಮಿಗೆ, ಅಶ್ಲೀಲ ವೀಡಿಯೋ ಚಿತ್ರದ ಸತ್ಯಾಸತ್ಯತೆ ಕುರಿತು ಸಂದರ್ಶಕರು ನೇರವಾಗಿ ಪ್ರಶ್ನೆ ಕೇಳಿರಲಿಲ್ಲ ಹಾಗೂ ಸ್ವಾಮೀಜಿಯಿಂದ ವೀಡಿಯೋ ಬಗ್ಗೆಯಾಗಲೀ, ನಟಿ ರಂಜಿತಾ ಬಗೆಗಾಗಲೀ ನೇರವಾಗಿ ಉಲ್ಲೇಖ, ಪ್ರತಿಕ್ರಿಯೆ ವ್ಯಕ್ತಿಯಾಗಿಲ್ಲ ಎಂಬುದು ಗಮನಾರ್ಹ.

ಒಂದು ಹಂತದಲ್ಲಿ ಸಂದರ್ಶಕರೇ ಮಾತನಾಡುತ್ತಾ, ಮಾಧ್ಯಮಗಳು ಈ ವಿಷಯವನ್ನು ಭಾವತೀವ್ರತೆಗೊಳಪಡಿಸಿದವು. ನಂತರ ಇಬ್ಬರು ಬಟ್ಟೆ ಧರಿಸಿಯೇ ಇರುವ ಈ ವೀಡಿಯೋದಲ್ಲಿ ಯಾವುದೇ ಅನೈತಿಕ ಅಥವಾ ಕಾನೂನು ವಿರೋಧವೆನಿಸುವ ದೃಶ್ಯಗಳಿಲ್ಲ ಎಂಬುದು ಮನವರಿಕೆಯಾದಾಗ, ತಿರುಚಿ ಪ್ರಕಟಿಸಲು ಆರಂಭಿಸಿದವು ಎಂದು ವಿಶ್ಲೇಷಿಸಿದಾಗ, ನಿತ್ಯಾನಂದರು ಸಮ್ಮತಿಯಿಂದ ತಲೆಯಾಡಿಸಿದರಷ್ಟೆ.
ಸಂದರ್ಶನದ ದೃಶ್ಯ...
PR

ಬಟ್ಟೆ ಹಾಕಿಕೊಂಡಿರುವ ಇಬ್ಬರು ವ್ಯಕ್ತಿಗಳು ಇರುವ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದು, ಇಲ್ಲಿ ಯಾವುದೇ ಕಾನೂನು ವಿರೋಧಿ ಚಟುವಟಿಕೆಗಳಿಲ್ಲ. ಅಲ್ಲದೆ ಅಲ್ಲಿ ವ್ಯಕ್ತಿಯ ಮೇಲೆ ಆಕೆ ಒತ್ತಾಯಪೂರ್ವಕವಾಗಿ ಏನನ್ನೋ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ವೀಡಿಯೋದ ಸಂದರ್ಶಕರೇ ವಿಶ್ಲೇಷಿಸಿದ್ದರು.

ತನ್ನ ಆಶ್ರಮವು ಆಧ್ಯಾತ್ಮಿಕ ಚಟುವಟಿಕೆಗಳತ್ತ ಗಮನ ಕೇಂದ್ರೀಕರಿಸುತ್ತಿರುವುದರಲ್ಲೇ ವ್ಯಸ್ತವಾಗಿದ್ದ ಕಾರಣ ಇಂಥದ್ದೊಂದು ದಾಳಿ ನಡೆಯುತ್ತದೆ, ನಮಗೆ ವೈರಿಗಳಿದ್ದಾರೆ ಎಂಬುದನ್ನು ಊಹಿಸಲು ಸಾಧ್ಯವಾಗಲಿಲ್ಲ. ಇದು ನಮ್ಮ ಸಾರ್ವಜನಿಕ ಸಂಬಂಧದ ವೈಫಲ್ಯ ಹೌದು. ದಾಳಿಯನ್ನು ಎದುರಿಸಲು ನಾವು ಸಿದ್ಧವಾಗಿರಲಿಲ್ಲ. ಹೀಗಾಗುತ್ತದೆ ಎಂದು ಯಾವತ್ತೂ ಊಹಿಸಿದವರಲ್ಲ. ಈ ರೀತಿ ಆಶ್ರಮಕ್ಕೆ ಧಕ್ಕೆಯಾದ ನಂತರ ನನಗೂ ತೊಂದರೆಯಾಗಬಹುದು, ನನ್ನನ್ನು ಕೊಲ್ಲಬಹುದು ಎಂದ ಭಕ್ತರು, ಈಗ ಆಶ್ರಮಕ್ಕೆ ಬರಬೇಡಿ ಎಂದು ಒತ್ತಾಯಿಸಿದ್ದಾರೆ. ಆದರೂ ನನ್ನ ಮೇಲೆ ಆಪಾದನೆಗಳು ಬರುತ್ತಿರುವ ಹೊತ್ತಲ್ಲಿ ಅವರು ಆಶ್ರಮವನ್ನು ರಕ್ಷಿಸುವಲ್ಲಿ ನಿರತರಾಗಿದ್ದರು, ಹೀಗಾಗಿ ಮಾಧ್ಯಮಗಳಿಗೆ ಸಮರ್ಥ ಮಾಹಿತಿ ನೀಡುವಲ್ಲಿಯೂ ವಿಫಲರಾದರು ಎಂದು ನಿತ್ಯಾನಂದ ಸ್ವಾಮಿ ವಿವರಣೆ ನೀಡಿದ್ದಾರೆ.

ಇಂಥದ್ದೆಲ್ಲವೂ ಒಂದು ಪಾಠ ಕಲಿಸಿದೆ ಮತ್ತು ನನ್ನ ಜವಾಬ್ದಾರಿಯನ್ನು ಜಾಗೃತಗೊಳಿಸಿವೆ. ನಮ್ಮ ಸಮಾಜವು ಮುಕ್ತವಾಗಿ ಸ್ವೀಕರಿಸದೇ ಇರುವಂತಹಾ ಪ್ರಯೋಗಗಳನ್ನು ನಡೆಸದೇ ಇರಲು ನಿರ್ಧರಿಸಿದ್ದೇನೆ ಎಂದೂ ನಿತ್ಯಾನಂದ ಹೇಳಿದರಾದರೂ, ಪ್ರಾಯೋಗಿಕ ಪ್ರಯತ್ನಗಳೇನು ಎಂಬುದನ್ನು ವಿಸ್ತರಿಸಲಿಲ್ಲ.

ನಮಗೆ ಯಾರೂ ಸಹಕರಿಸಿಲ್ಲ...
ಸಾಮಾಜಿಕವಾಗಿ ನಾವು ಸ್ವೀಕಾರಾರ್ಹವಾಗಿದ್ದ ಹೊರತಾಗಿಯೂ ಕಷ್ಟದಲ್ಲಿರುವಾಗ ನಮಗೆ ಯಾರೂ ಸಹಾಯಕ್ಕೆ ಬಂದಿಲ್ಲ ಎಂದು ಸಂದರ್ಶನದಲ್ಲಿ ಸ್ವಾಮಿ ಅಲವತ್ತುಕೊಂಡಿದ್ದಾರಲ್ಲದೆ, ಇಂತಹ ವಿಚಾರಗಳನ್ನು ಪ್ರಕಟಿಸುವಾಗ, ಮಾಧ್ಯಮಗಳು ನಮ್ಮ ಆಶ್ರಮದ ಸಂದರ್ಶನವನ್ನೂ ತೆಗೆದುಕೊಳ್ಳಲಿಲ್ಲ ಎಂದು ವಿಷಾದಿಸಿದರು.

ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾವು ಯಾರ ಸಹಾಯವನ್ನೂ ಸ್ವೀಕರಿಸಿಲ್ಲ. ನಮ್ಮ ವಿರುದ್ಧ ಆರೋಪಗಳ ಸುರಿಮಳೆಯೇ ಎದುರಾದಾಗ ಸ್ಥಳೀಯರು ಕೂಡ ನಮ್ಮ ಮೇಲೆ ಮುಗಿ ಬಿದ್ದರು. ಮಾಧ್ಯಮಗಳು ಕೂಡ ಪ್ರಕರಣದ ಒಂದು ಭಾಗವನ್ನಷ್ಟೇ ತೋರಿಸಿವೆ. ಮತ್ತೊಂದು ಬದಿಯನ್ನು ತೋರಿಸುವ ಯತ್ನವನ್ನೇ ನಡೆಸಿಲ್ಲ. ಆ ಮೂಲಕ ಪಕ್ಷಪಾತ ಮಾಡಿವೆ ಎಂದು ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೀಡಿಯೋ ಪರಿಶೀಲನೆಗಾಗಿ ಲಂಡನ್‌ಗೆ...
ಕನ್ನಡ ವಾಹಿನಿ 'ಈ ಟಿವಿ' ಜತೆಗೂ ಸಂದರ್ಶನದಲ್ಲಿ ಮಾತನಾಡಿರುವ ನಿತ್ಯಾನಂದ ಸ್ವಾಮಿ, 'ಭಕ್ತರು ಮತ್ತು ಜನತೆ ದಯವಿಟ್ಟು ಯಾವುದೇ ತರಾತುರಿಯ ನಿರ್ಧಾರಕ್ಕೆ ಬರಬೇಡಿ, ಸ್ವಲ್ಪ ದಿನ ಕಾಯಿರಿ. ಆಗ ಸತ್ಯಾಸತ್ಯತೆ ಬಯಲಿಗೆ ಬರುತ್ತದೆ' ಎಂದು ಹೇಳಿದ್ದಾರಲ್ಲದೆ, ವೀಡಿಯೋದ ಸತ್ಯಾಸತ್ಯತೆ ಪರಿಶೀಲನೆಗಾಗಿ ಅದನ್ನು ಲಂಡನ್‌ನ ಪ್ರಯೋಗಾಲಯವೊಂದಕ್ಕೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಈಗ ನಡೆದಿರುವ ಘಟನೆಯಿಂದ ನನಗೆ ತೀವ್ರ ನೋವುಂಟಾಗಿದೆ. ನಾನು ಎಷ್ಟೋ ವರ್ಷಗಳಿಂದ ಮಾಡಿರುವ ಸಾಧನೆಗಳೆಲ್ಲ ನೀರುಪಾಲಾಗಿದೆ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಆದರೂ ನನ್ನ ಮತ್ತು ಆಶ್ರಮದ ಕೀರ್ತಿಗೆ ಧಕ್ಕೆಯಿಲ್ಲ ಎಂಬುದು ದಿಟ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಬಹುದೊಡ್ಡ ಪಾಠವನ್ನು ನಾನು ಕಲಿತಿದ್ದೇನೆ. ಯಾರನ್ನೂ ನಂಬಲಾರದ ಪರಿಸ್ಥಿತಿ ನನಗೆ ಎದುರಾಗಿದೆ. ಆದರೆ ಒಂದು ವಿಚಾರ ಮಾತ್ರ ಸ್ಪಷ್ಟವಾಗಿದೆ -- ಈಗ ನನ್ನ ವಿರುದ್ಧ ಪಿತೂರಿ ನಡೆಸುತ್ತಿರುವ, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರು ನೈಜ ಭಕ್ತರಲ್ಲ. ನನ್ನ ಮೂಲ ಭಕ್ತರು, ಅನುಯಾಯಿಗಳು ಎಲ್ಲರೂ ನನ್ನ ಜತೆ ಇದ್ದಾರೆ. ಅದೇ ನನಗೆ ಸಮಾಧಾನ ಎಂದು ಸ್ವಾಮಿ ವಿವರಣೆ ನೀಡಿದ್ದಾರೆ.

ಸ್ವಾಮಿಗೆ ಕೋರ್ಟ್ ಸಮನ್ಸ್...
ಸೆಕ್ಸ್ ಹಗರಣದಲ್ಲಿ ಸಿಲುಕಿರುವ ಸ್ವಾಮಿಗೆ ಶ್ರೀಪೆರುಂಬುದೂರ್‌ನಲ್ಲಿನ ಜಿಲ್ಲಾ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದ್ದು, ಏಪ್ರಿಲ್ 2ರೊಳಗೆ ಹಾಜರಾಗುವಂತೆ ಆದೇಶ ನೀಡಿದೆ.

ಕೆ. ಸೆಲ್ವಮಣಿ ಎಂಬ ವಕೀಲರು ದಾಖಲಿಸಿರುವ ವೈಯಕ್ತಿಕ ದಾವೆಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಧೀಶರು ಈ ಸಮನ್ಸ್ ಜಾರಿಗೊಳಿಸಿದ್ದಾರೆ. ನಿತ್ಯಾನಂದ ಸ್ವಾಮಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ