ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಜತೆ ಮತ್ತೊಂದು ಸುತ್ತಿನ ಮಾತುಕತೆಗೆ ಭಾರತ ಸಿದ್ಧ! (Mumbai attacks | Shahid Malik | P Chidambaram | Ind-Pak talks)
Bookmark and Share Feedback Print
 
ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದಿದ್ದ ಅಧಿಕೃತ ಮಾತುಕತೆ ಬಹುತೇಕ ವಿಫಲಗೊಂಡಿದ್ದರೂ ಸಂಬಂಧ ವೃದ್ಧಿಯತ್ತ ಗಮನ ನೆಟ್ಟಿರುವ ಭಾರತ ಮತ್ತೊಂದು ಸುತ್ತಿನ ಮಾತುಕತೆಗೆ ತಾನು ಸಿದ್ಧ ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ.

ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳತ್ತ ಹೆಚ್ಚು ಒತ್ತು ಕೊಡುತ್ತಿದ್ದು, ಇದೇ ಸಂಬಂಧ ಕಳೆದ ತಿಂಗಳು ದೆಹಲಿಯಲ್ಲಿ ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಮಾತುಕತೆ ಆರಂಭಿಸಿದ್ದರು.

2008ರ ಮುಂಬೈ ಭಯೋತ್ಪಾದನಾ ದಾಳಿಯ ಬಳಿಕ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಭಾರತ ಪುನರಾರಂಭಿಸಿತ್ತು. ಈ ಮಾತುಕತೆ ಸಂದರ್ಭದಲ್ಲಿ ನಿರಂತರ ಸಂಪರ್ಕದಲ್ಲಿರುವಂತೆ ಪರಸ್ಪರ ಒಪ್ಪಿಕೊಂಡಿದ್ದರೂ ಮುಂದಿನ ಸುತ್ತಿನ ಮಾತುಕತೆಗಳ ಬಗ್ಗೆ ಯಾರೊಬ್ಬರೂ ಚಕಾರವೆತ್ತಿರಲಿಲ್ಲ.

ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ಮೂಲಕ ನಾವು ಆರಂಭಕ್ಕೆ ಯತ್ನಿಸಿದ್ದೇವೆ. ಆದರೆ ಇದರಿಂದ ಯಾವುದೇ ಫಲಿತಾಂಶ ಬರಲಿಲ್ಲ. ಆದರೂ ನಾವು ಮತ್ತೊಂದು ಸುತ್ತಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದೇನೆ ಎಂದು ಗೃಹಸಚಿವ ಪಿ. ಚಿದಂಬರಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಿದಂಬರಂ ಹೇಳಿಕೆಗೆ ಭಾರತದಲ್ಲಿನ ಪಾಕಿಸ್ತಾನದ ರಾಯಭಾರಿ ಪೂರಕ ಪ್ರತಿಕ್ರಿಯೆ ನೀಡಿದ್ದಾರೆ. 'ಮುಂದಿನ ಮಾತುಕತೆಗೆ ವೇದಿಕೆ ಸಿದ್ಧಪಡಿಸಿ ಎಂದು ನಮಗೆ ಸಲಹೆ ನೀಡಲಾಗಿದೆ. ಇದಕ್ಕೆ ಭಾರತ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬ ಭರವಸೆ ನಮ್ಮದು' ಎಂದು ರಾಯಭಾರಿ ಶಾಹಿದ್ ಮಲಿಕ್ ತಿಳಿಸಿದ್ದಾರೆ.

ಪ್ರತಿಪಕ್ಷಗಳ ಆಕ್ಷೇಪದ ಹೊರತಾಗಿಯೂ ಮುಂಬೈ ದಾಳಿಯ ಬಳಿಕ ಸ್ಥಗಿತಗೊಂಡಿದ್ದ ಮಾತುಕತೆಗೆ ಚಾಲನೆ ನೀಡಿದ್ದ ಭಾರತವು, ಭಯೋತ್ಪಾದಕ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹೊರತು ಸಮಗ್ರ ಮಾತುಕತೆಗೆ ಸಿದ್ಧವಿಲ್ಲ ಎಂದು ಹೇಳುತ್ತಾ ಬಂದಿದೆ.

ಪಾಕಿಸ್ತಾನವು ಭಯೋತ್ಪಾದನೆಯನ್ನು ಮಟ್ಟ ಹಾಕಲು ಪ್ರಾಮಾಣಿಕ ಯತ್ನ ನಡೆಸದೇ ಇರುವ ಹೊರತಾಗಿಯೂ ಭಾರತ ಆ ದೇಶದೊಂದಿಗೆ ಮಾತುಕತೆ ನಡೆಸಲು ಅಮೆರಿಕಾದ ತೀವ್ರ ಒತ್ತಡವೇ ಕಾರಣ ಎಂದು ಬಿಜೆಪಿ ಇತ್ತೀಚೆಗಷ್ಟೇ ಆರೋಪಿಸಿತ್ತು. ಇದಕ್ಕೆ ಕೆಂಡಾಮಂಡಲವಾಗಿದ್ದ ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿಯು ಸಂಬಂಧದಲ್ಲಿ ಭಿನ್ನಮತ ಹುಟ್ಟಿಸಲು ಯತ್ನಿಸುತ್ತಿದೆ ಎಂದಿದ್ದರು.

ದೆಹಲಿ ಮಾತುಕತೆ ಸಂದರ್ಭದಲ್ಲಿ ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್ ವಿರುದ್ಧ ಸಾಕ್ಷ್ಯಗಳನ್ನು ಹಸ್ತಾಂತರಿಸಿ, ಆತನನ್ನು ಬಂಧಿಸುವಂತೆ ಭಾರತ ಆಗ್ರಹಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಮಾತು ಬದಲಿಸಿದ್ದ ಪಾಕಿಸ್ತಾನ, ಭಾರತವು ಅಂತಹ ಯಾವುದೇ ಪುರಾವೆಗಳನ್ನು ನೀಡಿಲ್ಲ ಮತ್ತು ಸಯೀದ್ ವಿಚಾರವೇ ಮಾತುಕತೆಯಲ್ಲಿ ಪ್ರಸ್ತಾಪವಾಗಿಲ್ಲ ಎನ್ನುವ ಮೂಲಕ ವಿಶ್ವಾಸ ದ್ರೋಹ ಎಸಗಿತ್ತು.

ಇತ್ತೀಚಿನ ಲಾಹೋರ್ ಆತ್ಮಹತ್ಯಾ ದಾಳಿಯಲ್ಲಿ ಭಾರತದ ಕೈವಾಡವಿದೆ, ಅಫಘಾನಿಸ್ತಾನ ರಾಯಭಾರ ಕಚೇರಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಪಿತೂರಿ ನಡೆಸುತ್ತಿದೆ ಮುಂತಾದ ಆರೋಪಗಳನ್ನು ಇತ್ತೀಚೆಗಷ್ಟೇ ಮಾಡಿರುವ ಪಾಕಿಸ್ತಾನದ ಜತೆ ಮತ್ತೆ ಮಾತುಕತೆಗೆ ಭಾರತವೇ ಮುಂದಾಗಿರುವುದು ಎಷ್ಟು ಸರಿ ಎಂಬುದು ಇದೀಗ ಜಿಜ್ಞಾಸೆಗೆ ಕಾರಣವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ