ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನದಿಗೆ ಉರುಳಿದ ಬಸ್; ವಿದ್ಯಾರ್ಥಿಗಳೂ ಸೇರಿ 26 ಸಾವು
(bus falls off bridge | Rajasthan | Sawai Madhopur | Dausa border)
ಸೋಮವಾರ ಮುಂಜಾನೆ ರಾಜಸ್ಥಾನದ ಸವಾಯಿ ಮಧುಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ನದಿಗುರುಳಿದ ಪರಿಣಾಮ ಕನಿಷ್ಠ 26 ಮಂದಿ ಸಾವನ್ನಪ್ಪಿದ್ದು, 34ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ಜಲಾವರ್‌ನಲ್ಲಿನ 'ಮದರ್ ಇಂಡಿಯಾ' ಶಿಕ್ಷಕರ ತರಬೇತಿ ಕಾಲೇಜಿನ 62 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಹೊತ್ತಿದ್ದ ಬಸ್ ಅಫಘಾತಕ್ಕೀಡಾಗಿದ್ದು, 11 ಮಹಿಳೆಯರೂ ಸೇರಿದಂತೆ ಒಟ್ಟು 26 ಮಂದಿ ಸಾವನ್ನಪ್ಪಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಸೋಮವಾರ ಮುಂಜಾನೆ 3.30ರ ಹೊತ್ತಿಗೆ ಜೈಪುರದಿಂದ 162 ಕಿಲೋ ಮೀಟರ್ ದೂರದಲ್ಲಿರುವ ಸವಾಯಿ ಮಧುಪುರ - ದೌಸಾ ಗಡಿ ನಡುವೆ ಈ ಘಟನೆ ಸಂಭವಿಸಿದ್ದು, ಸೇತುವೆಯಲ್ಲಿ ನಿಂತಿದ್ದ ವಾಹನವೊಂದಕ್ಕೆ ಬಸ್ ಢಿಕ್ಕಿ ಹೊಡೆದ ಬಳಿಕ ನದಿಗೆ ಉರುಳಿ ಬಿದ್ದಿತ್ತು.
ಬೃಂದಾವನಕ್ಕೆ ಶೈಕ್ಷಣಿಕ ಪ್ರವಾಸ ಹೊರಟಿದ್ದ ತಂಡವು ಜಲಾವರ್‌ಗೆ ಮರಳುತ್ತಿತ್ತು.
21 ಮಂದಿ ಅಫಘಾತ ಸ್ಥಳದಲ್ಲಿಯೇ ಮೃತರಾಗಿದ್ದರೆ, ಐವರು ಆಸ್ಪತ್ರೆ ಹಾದಿಯಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಒಟ್ಟು 51 ವಿದ್ಯಾರ್ಥಿಗಳು ಹಾಗೂ ಒಂಬತ್ತು ಮಂದಿ ಸಿಬ್ಬಂದಿಗಳಿದ್ದರು. ಸಾವನ್ನಪ್ಪಿದವರು 18ರಿಂದ 25 ವರ್ಷ ವಯಸ್ಸಿನೊಳಗಿನವರು ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಮುಂಜಾನೆ ನಡೆದಿದೆ. ಶಿಕ್ಷಕರ ತರಬೇತಿ ಶಾಲೆಯ ಬಸ್ ಸೇತುವೆಯಿಂದ ಮೋರೆಲ್ ಎಂಬ ನದಿಗೆ ಉರುಳಿ ಬಿದ್ದಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಇದುವರೆಗೆ 26 ಶವಗಳು ಪತ್ತೆಯಾಗಿವೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.