ಇತ್ತೀಚೆಗಷ್ಟೇ ಕಾಲ್ತುಳಿತಕ್ಕೆ 65 ಮಂದಿ ಸತ್ತಾಗ ಪರಿಹಾರ ನೀಡಲು ಹಣವಿಲ್ಲ ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಇದೀಗ ಬಹುಜನ ಸಮಾಜವಾದಿ ಪಕ್ಷದ ರಜತ ಮಹೋತ್ಸವಕ್ಕೆ ಸರಕಾರದ ವತಿಯಿಂದ 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಇಂದು ಲಕ್ನೋದಲ್ಲಿ ನಡೆಯುತ್ತಿರುವ ಬಿಎಸ್‌ಪಿಯ 25ನೇ ವರ್ಷದ ಸಂಭ್ರಮ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ, ಕರ್ನಾಟಕ, ಕೇರಳ ಸೇರಿದಂತೆ ದೇಶದಾದ್ಯಂತದ ಸಾವಿರಾರು ಕಾರ್ಯಕರ್ತರು ಉತ್ತರ ಪ್ರದೇಶಕ್ಕೆ ಬಂದಿದ್ದು, ನಗರವನ್ನು ಸಂಪೂರ್ಣ ನೀಲಿಮಯವನ್ನಾಗಿಸಲಾಗಿದೆ. ಬಿಎಸ್‌ಪಿ ಬೆಳ್ಳಿ ಹಬ್ಬದ ಸಂಭ್ರಮದ ದಿನದಂದೇ ಪಕ್ಷದ ಸಂಸ್ಥಾಪಕ ಕಾನ್ಶೀರಾಂ ಅವರ ಹುಟ್ಟು ಹಬ್ಬವೂ ಆಗಿರುವುದು ವಿಶೇಷ.
ಅಂದಾಜುಗಳ ಪ್ರಕಾರ ಈ ಕಾರ್ಯಕ್ರಮದಲ್ಲಿ ಸುಮಾರು 20 ಲಕ್ಷ ಜನ ಭಾಗವಹಿಸುತ್ತಿದ್ದಾರೆ. 1984ರ ಏಪ್ರಿಲ್ 14ರಂದು ಅಸ್ತಿತ್ವಕ್ಕೆ ಬಂದಿದ್ದ ಬಿಎಸ್‌ಪಿ ಕಳೆದ ವರ್ಷವೇ 25 ವರ್ಷಗಳನ್ನು ಪೂರೈಸಿತ್ತು. ಆದರೆ ಲೋಕಸಭಾ ಚುನಾವಣೆಗಳ ಕಾರಣದಿಂದ ಸಂಭ್ರಮವನ್ನು ಮುಂದೂಡಲಾಗಿತ್ತು.
ಕಾರ್ಯಕ್ರಮಕ್ಕೆ 10,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮೈದಾನದುದ್ದಕ್ಕೂ ನೂರಾರು ಸಿಸಿಟಿವಿಗಳನ್ನು ಹಾಕಲಾಗಿದೆ. ಏನಾದರೂ ಅಪಾಯ ಸಂಭವಿಸಿದರೆ ಎಂದು ಮುಂಜಾಗ್ರತಾ ಕ್ರಮವಾಗಿ 30 ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆಯೊಂದನ್ನು ಕೂಡ ಇಲ್ಲಿ ತೆರೆಯಲಾಗಿದೆ. 200 ವೈದ್ಯರು, 500 ಸಹಾಯಕ ಸಿಬ್ಬಂದಿಗಳು ಇಲ್ಲಿ ಸಿದ್ಧರಿರುತ್ತಾರೆ.
25,000 ಚದರ ಮೀಟರ್ ವ್ಯಾಪ್ತಿಯಲ್ಲಿ 15 ವಾಟರ್‌ಪ್ರೂಫ್ ವಿಶೇಷ ಪೆಂಡಾಲುಗಳನ್ನು ಹಾಕಲಾಗಿದೆ. 7,000 ಚದರ ಮೀಟರಿಗೂ ಹೆಚ್ಚು ವಿಸ್ತಾರದ ಡೈನಿಂಗ್ ಹಾಲ್ ನಿರ್ಮಿಸಲಾಗಿದೆ. ಇಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಸಲ್ಲುವ ತಿಂಡಿ-ತೀರ್ಥ ಲಭ್ಯ ಎಂದು ಸಂಘಟಕರು ವಿವರಣೆ ನೀಡಿದ್ದಾರೆ.
1,600 ಸರಕಾರಿ ಬಸ್ಸುಗಳು, 5,000 ಖಾಸಗಿ ಬಸ್ಸುಗಳನ್ನು ಕಾರ್ಯಕ್ರಮಕ್ಕಾಗಿ ಬಾಡಿಗೆ ಪಡೆಯಲಾಗಿದೆ. 10 ಲಕ್ಷ ಎಲ್‌ಇಡಿ ಲೈಟ್‌ಗಳನ್ನು ನಗರದಾದ್ಯಂತ ಬಳಸಲಾಗಿದ್ದು, ಬಿಎಸ್‌ಪಿ ಬಣ್ಣವಾದ ನೀಲಿ ನಗರದಲ್ಲಿ ಕಣ್ಣಿಗೆ ರಾಚುತ್ತಿದೆ.
ದೆಹಲಿ, ಮುಂಬೈ, ಪುಣೆ, ಉತ್ತರಾಖಂಡ, ಬೆಂಗಳೂರು ಮತ್ತು ಕೊಲ್ಕತ್ತಾಗಳಿಂದ ಸಾವಿರ ಕ್ವಿಂಟಾಲ್‌ಗೂ ಹೆಚ್ಚು ಬಗೆಬಗೆಯ ಹೂವುಗಳನ್ನು ತರಿಸಿಕೊಳ್ಳಲಾಗಿದೆ. ಇದನ್ನು ಕಾರ್ಯಕ್ರಮ ನಡೆಯುವ ಪ್ರಮುಖ ಅಂಗಣದಲ್ಲಿ ಬಳಸಲಾಗಿದೆ.
ಆದರೆ ಈ ಸಂಭ್ರಮಕ್ಕೆ ಸರಕಾರಿ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿರೋಧಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಆಶ್ರಮವೊಂದರಲ್ಲಿ ಊಟದ ವೇಳೆ ಕಾಲ್ತುಳಿತ ಸಂಭವಿಸಿದಾಗ ನೂಕುನುಗ್ಗಲಿನಲ್ಲಿ 65 ಮಂದಿ ಸಾವನ್ನಪ್ಪಿದ್ದರು. ಅವರಿಗೆ ಪರಿಹಾರ ನೀಡಲು ರಾಜ್ಯ ಸರಕಾರದಲ್ಲಿ ಹಣವಿಲ್ಲ, ಕೇಂದ್ರ ಸರಕಾರ ಪರಿಹಾರ ನೀಡಲಿ ಎಂದು ಹೇಳಿದ್ದ ಮಾಯಾವತಿ ಇದೀಗ ಪಕ್ಷದ ಒಂದು ದಿನದ ಕಾರ್ಯಕ್ರಮಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.
ಸಂತ್ರಸ್ತರಿಗೆ ಪರಿಹಾರ ನೀಡಲು ಹಣವಿಲ್ಲ ಎಂಬ ಮಾಯಾವತಿ ಹೇಳಿಕೆಗೆ ತೀವ್ರ ಟೀಕೆ ಬಂದ ನಂತರ 2.5 ಲಕ್ಷ ರೂಪಾಯಿಗಳಂತೆ ಪರಿಹಾರವನ್ನು ರಾಜ್ಯ ಸರಕಾರ ಘೋಷಿಸಿತ್ತು.