ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೆಪ್ಸಿ ಬಾಂಬರ್, ಮತ್ತೊಬ್ಬ ಉಗ್ರ ಮತ್ತು ಆತನ ಲವ್ ಸ್ಟೋರಿ!
(Love story of a terrorist | Riyaz Ali Sheikh | ONGC | Pepsi Bomber)
ಪೆಪ್ಸಿ ಬಾಂಬರ್, ಮತ್ತೊಬ್ಬ ಉಗ್ರ ಮತ್ತು ಆತನ ಲವ್ ಸ್ಟೋರಿ!
ಮುಂಬೈ, ಸೋಮವಾರ, 15 ಮಾರ್ಚ್ 2010( 15:23 IST )
ಗುಜರಾತ್ ಪೊಲೀಸರ ಕೈಗೆ ಸಿಕ್ಕಿ ಬಿದ್ದವ ಪೆಪ್ಸಿ ಬಾಂಬರ್ ಬಶೀರ್ ಅಹ್ಮದ್ ಬಾಬಾ. ಅಪ್ರಾಪ್ತ ಬಾಲಕಿ ಸೀತಾಳನ್ನು ಪ್ರೀತಿಸಿ ಎತ್ತಿ ಹಾಕಿಕೊಂಡು ಹೋಗಿ ಬಂಧಿತನಾಗಿ ತಪ್ಪಿಸಿಕೊಂಡು ಹೋಗಿದ್ದವ ರಿಯಾಜ್ ಆಲಿ ಶೇಖ್. ಈತ ಮುಂಬೈಯಲ್ಲಿ ಒಎನ್‌ಜಿಸಿ ಸ್ಫೋಟಕ್ಕೆ ಸಂಚು ರೂಪಿಸಿ ಮಹಾರಾಷ್ಟ್ರ ಪೊಲೀಸರ ಕೈಯಲ್ಲಿ ಒದೆ ತಿನ್ನುತ್ತಿದ್ದಾನೆ.
ಇದು ಉಗ್ರನ ಲವ್ ಸ್ಟೋರಿ... ಅಬ್ದುಲ್ ಲತೀಫ್ ರಷೀದ್ ಯಾನೆ ಗುಡ್ಡು (29) ಮತ್ತು ರಿಯಾಜ್ ಆಲಿ ಶೇಖ್ ಯಾನೆ ರೆಹಾನ್ (23) ಎಂಬ ಇಬ್ಬರು ಭಯೋತ್ಪಾದಕರನ್ನು ಶನಿವಾರ ರಾತ್ರಿ ಮುಂಬೈಯ ಮಾತುಂಗಾ ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇವರು ಒಎನ್‌ಜಿಸಿ ತೈಲಸ್ಥಾವರ, ಮಂಗ್ಳಾ ಮಾರ್ಕೆಟ್ ಮತ್ತು ಟಕ್ಕರ್ ಮಾಲ್‌ಗಳಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದರು.
ಈ ಇಬ್ಬರು ಶಂಕಿತ ಉಗ್ರರಲ್ಲಿ ರಿಯಾಜ್ ಆಲಿ ಎನ್ನುವಾತ ಕಳೆದ ವರ್ಷ ಅಪ್ರಾಪ್ತ ಬಾಲಕಿಯೊಬ್ಬಳೊಂದಿಗೆ ಪರಾರಿಯಾಗಿ ಸುದ್ದಿ ಮಾಡಿದ್ದ. ಆದರೆ ಆ ಸಂದರ್ಭದಲ್ಲಿ ನಮಗೆ ಆತ ಉಗ್ರನೆಂಬ ಯಾವುದೇ ಶಂಕೆ ಇರಲಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ಟಕ್ಕರ್ ಮಾಲ್‌ನಲ್ಲಿ ಮಳಿಗೆಯೊಂದನ್ನು ಹೊಂದಿರುವ ವ್ಯಕ್ತಿಯ ಪುತ್ರಿ, ಎನ್‌ಕೆ ಕಾಲೇಜಿನ 17ರ ಹರೆಯದ ವಿದ್ಯಾರ್ಥಿನಿ ಸೀತಾ ಎಂಬಾಕೆಯನ್ನು ರಿಯಾಜ್ ಪ್ರೀತಿಸುತ್ತಿದ್ದ. ಇಬ್ಬರೂ ಪರಾರಿಯಾದ ನಂತರ ಸೀತಾಳ ತಂದೆ ರಿಯಾಜ್ ವಿರುದ್ಧ ಅಪಹರಣ ದೂರನ್ನು ಪೊಲೀಸರಿಗೆ ನೀಡಿದ್ದರು.
ಪೊಲೀಸರ ಪ್ರಕಾರ ಸೀತಾಳ ತಂದೆಯ ಅಂಗಡಿಗೆ ಆಗಾಗ ಬರುತ್ತಿದ್ದ ರಿಯಾಜ್ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದ. ಇದು ತಿಳಿದು ಬರುತ್ತಿದ್ದಂತೆ ಸೀತಾಳ ಹೆತ್ತವರು ಜಾಗೃತರಾಗಿ, ಸೀತಾಳನ್ನು ನಿರ್ಬಂಧಿಸತೊಡಗಿದರು. ಕಾಲೇಜಿಗೆ ಕೂಡ ಆಕೆಯ ತಾಯಿಯೇ ಬಿಟ್ಟು ಬರುತ್ತಿದ್ದರು.
ಇದರಿಂದ ದಿಕ್ಕೆಟ್ಟ ರಿಯಾಜ್ ಸೀತಾಳಿಗೆ ಬುರ್ಖಾ ತೊಡಿಸಿ ಕಾಲೇಜಿನಿಂದ ಹೊರಗೆ ಕರೆಸಿಕೊಂಡು ಬಳಿಕ ಪರಾರಿಯಾಗಿದ್ದರು. ಆದರೆ ಅವರ ಮೊಬೈಲ್ ಟ್ರ್ಯಾಕ್ ಮಾಡಿ ಇಬ್ಬರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡು ರೈಲಿನಲ್ಲಿ ವಾಪಸ್ ಬರುತ್ತಿದ್ದಾಗ ರಿಯಾಜ್ ರೈಲಿನಿಂದ ಹಾರಿ ತಪ್ಪಿಸಿಕೊಂಡಿದ್ದ.
ಆದರೆ ಬಳಿಕ ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದಾಗ ಸಾರ್ವಜನಿಕರೇ ಆತನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು. ಆದರೆ ಸೀತಾಳ ತಂದೆ ಪ್ರಕರಣವನ್ನು ಮುಂದುವರಿಸಲು ಇಚ್ಛೆ ತೋರಿಸದೇ ಇದ್ದುದರಿಂದ ರಿಯಾಜ್‌ನನ್ನು ಅಪಹರಣ ಪ್ರಕರಣದಿಂದ ಕೈ ಬಿಡಲಾಗಿತ್ತು.
ಇದೀಗ ಸೀತಾಳ ತಂದೆಯನ್ನು ಠಾಣೆಗೆ ಬರಲು ಪೊಲೀಸರು ಸೂಚನೆ ನೀಡಿದ್ದು, ಆಕೆ ರಿಯಾಜ್ ಜತೆ ಈಗಲೂ ಸಂಬಂಧ ಹೊಂದಿದ್ದಾಳೆಯೇ ಎಂಬುದರ ಕುರಿತು ವಿಚಾರಣೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಅದೇ ಹೊತ್ತಿಗೆ ರಿಯಾಜ್ ತಂದೆ ಅಬೂಬಕ್ಕರ್ ತನ್ನ ಮಗ ಭಯೋತ್ಪಾದಕ ಎಂಬುದನ್ನು ನಿರಾಕರಿಸಿದ್ದಾರೆ. 'ನನ್ನ ಮಗ ಮಾಡಿದ್ದ ಏಕೈಕ ತಪ್ಪೆಂದರೆ ಹುಡುಗಿಯೊಬ್ಬಳನ್ನು ಪ್ರೀತಿ ಮಾಡಿದ್ದು ಮತ್ತು ಪರಾರಿಯಾದದ್ದು. ಇದೇ ಕಾರಣದಿಂದ ಆತನನ್ನು ಪೊಲೀಸರು ಸುಳ್ಳು ಪ್ರಕರಣದ ಮೂಲಕ ಸಿಕ್ಕಿಸಿ ಹಾಕಿದ್ದಾರೆ' ಎಂದು ಆರೋಪಿಸಿದ್ದಾರೆ.
ರಿಯಾಜ್ ಸಹೋದರಿಯನ್ನು ಮತ್ತೊಬ್ಬ ಶಂಕಿತ ಉಗ್ರ ಬಂಧಿತ ಅಬ್ದುಲ್ ಲತೀಫ್ ಒಂಬತ್ತು ವರ್ಷಗಳ ಹಿಂದೆಯೇ ಮದುವೆಯಾಗಿದ್ದ. ಆತನಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಈತ ಪೆಪ್ಸಿ ಬಾಂಬರ್... ಅತ್ತ ಗುಜರಾತ್‌ನ ಅಹಮದಾಬಾದ್‌ನಲ್ಲಿ ಅಲ್ಲಿನ ಎಟಿಎಸ್ ಕೂಡ ಇಬ್ಬರು ಉಗ್ರರನ್ನು ಬಂಧಿಸಿದೆ. ಹಿಜ್ಬುಲ್ ಮುಜಾಹಿದೀನ್ ಸಹಚರ ಬಶೀರ್ ಅಹ್ಮದ್ ಬಾಬಾ (32) ಎಂಬ ಶ್ರೀನಗರ ನಿವಾಸಿ ಅಹಮದಾಬಾದ್‌ನಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಸ್ಥಳೀಯ ಯುವಕರನ್ನು ತರಬೇತಿಗಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದ ವೇಳೆ ಬಂಧಿಸಲಾಗಿದೆ. ಈತನ ಜತೆ ಮತ್ತೊಬ್ಬ ಯುವಕನನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಬಶೀರ್‌ಗೆ ಪೆಪ್ಸಿ ಬಾಂಬರ್ ಎಂಬ ಅಡ್ಡ ಹೆಸರು ಕೂಡ ಇದೆ. ಖಾಲಿ ಪೆಪ್ಸಿ ಬಾಟಲಿಗಳಲ್ಲಿ ಬಾಂಬ್ ಜೋಡಿಸುವಷ್ಟು ಚಾಣಾಕ್ಷ ಈತನಾಗಿರುವ ಕಾರಣ ಈ ಹೆಸರು ಬಂದಿದೆ.
ಈ ಹಿಂದೆ ಹಲವಾರು ಬಾರಿ ಪಾಕಿಸ್ತಾನಕ್ಕೆ ಭೇಟಿ ಮಾಡಿರುವುದನ್ನು ಬಶೀರ್ ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದು ಗುಜರಾತ್, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಭೇಟಿ ನೀಡಿ ಟಾರ್ಗೆಟ್‌ಗಳನ್ನು ಪರಿಚಯ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.