ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರಿಗೆ 60 ವರ್ಷಗಳವರೆಗೆ ಜೈಲು ಶಿಕ್ಷೆ: ಮಹಾರಾಷ್ಟ್ರ ಚಿಂತನೆ
(Maharashtra | R R Patil | jail for terrorists | Bombay High Court)
ಉಗ್ರರಿಗೆ 60 ವರ್ಷಗಳವರೆಗೆ ಜೈಲು ಶಿಕ್ಷೆ: ಮಹಾರಾಷ್ಟ್ರ ಚಿಂತನೆ
ಮುಂಬೈ, ಸೋಮವಾರ, 15 ಮಾರ್ಚ್ 2010( 18:55 IST )
ಭಯೋತ್ಪಾದಕರಿಗೆ ನೀಡುವ ಶಿಕ್ಷೆಯ ಪ್ರಮಾಣದಲ್ಲಿ ಹೆಚ್ಚಳಗೊಳಿಸುವ ಸಲುವಾಗಿ ಅಪರಾಧ ಕಾಯ್ದೆಗಳಿಗೆ ತಿದ್ದುಪಡಿ ತರುವ ಬಗ್ಗೆ ಸರಕಾರವು ಪರಿಗಣನೆ ನಡೆಸುತ್ತಿದೆ ಎಂದು ಹೇಳಿರುವ ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್, ಪ್ರಮುಖ ಪ್ರಕರಣಗಳಲ್ಲಿ ಉಗ್ರರಿಗೆ 60 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸುವ ಪ್ರಸ್ತಾಪ ನಮ್ಮ ಮುಂದಿದೆ ಎಂದು ತಿಳಿಸಿದ್ದಾರೆ.
ಭಾನುವಾರ ಸಂಜೆ ಪುಣೆಯಲ್ಲಿ ದೇಶದ ಮೊತ್ತ ಮೊದಲ ಮಹಿಳೆಯರಿಗಾಗಿನ ಕಾರಾಗೃಹವನ್ನು ಉದ್ಘಾಟಿಸಿದ ನಂತರ ಮಾತನಾಡುತ್ತಿದ್ದ ಪಾಟೀಲ್, ಭಯೋತ್ಪಾದಕರು ಮತ್ತು ರಾಷ್ಟ್ರ ವಿರೋಧಿಗಳಿಗೆ 60 ವರ್ಷಗಳ ಅವಧಿಯ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ನಮ್ಮ ಮುಂದಿದೆ ಎಂದರು.
ಈ ಸಂಬಂಧದ ಪ್ರಸ್ತಾವನೆಯನ್ನು ನಾನು ದೃಢಪಡಿಸಿದ್ದು, ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಬಾಂಬೆ ಹೈಕೋರ್ಟ್ ಮತ್ತು ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರವು ಈ ವಿಚಾರವನ್ನು ಪ್ರಸ್ತಾಪಿಸುತ್ತಿದೆ.
ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ನೀಡುವ ಕಾಯ್ದೆಗಳ ಜಾರಿ ಕುರಿತ ಚರ್ಚೆಗಳನ್ನು ನಾವು ಕೇಂದ್ರ ಸರಕಾರದೊಂದಿಗೆ ಮಾಡುತ್ತಿದ್ದೇವೆ ಎಂದು ಪಾಟೀಲ್ ತಿಳಿಸಿದ್ದಾರೆ.
ಪ್ರಸಕ್ತ ಇರುವ ಕಾನೂನುಗಳಲ್ಲಿ ಕೆಲವು ದೋಷಗಳಿರುವುದನ್ನು ಪಾಟೀಲ್ ಇದೇ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ.
ಈಗಿನ ಕಾನೂನುಗಳ ಪ್ರಕಾರ ಜಿಲ್ಲಾ ನ್ಯಾಯಾಲಯವೊಂದು ಅಪರಾಧಿಯೊಬ್ಬನಿಗೆ ಮರಣ ದಂಡನೆ ವಿಧಿಸಿದರೆ, ಅದನ್ನು ಹೈಕೋರ್ಟ್ ಖಚಿತಪಡಿಸ ಬೇಕಾಗುತ್ತದೆ. ಅಪರಾಧಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಕೂಡ ಹೊಂದಿದ್ದಾನೆ. ಸುಪ್ರೀಂ ಕೋರ್ಟ್ ಮರಣ ದಂಡನೆಯನ್ನು ಖಚಿತಪಡಿಸಿದರೂ ಅಂತಿಮವಾಗಿ ರಾಷ್ಟ್ರಪತಿಯವರ ಒಪ್ಪಿಗೆ ಅತ್ಯಗತ್ಯವಾಗಿರುತ್ತದೆ. ಇದನ್ನು ಜೈಲಿನಲ್ಲಿರುವ ಕ್ರಿಮಿನಲ್‌ಗಳು ನೋಡಿ ಸರಕಾರದತ್ತ ಹಾಸ್ಯ ಮಾಡುತ್ತಿದ್ದಾರೆ ಎಂದರು.