ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಯಾ ಕೊರಳಿಗೆ ಐದು ಕೋಟಿ ಹಾರ ಹಾಕಿದ್ದು ಕರ್ನಾಟಕ! (VN Sharma | Mayawati | Kanshi Ram | Currency Garland)
Bookmark and Share Feedback Print
 
ಇದೇ ನೋಟಿನ ಮಾಲೆ..
PR
ನಿನ್ನೆ ಲಕ್ನೋದಲ್ಲಿ ನಡೆದ ಬಹುಜನ ಸಮಾಜವಾದಿ ಪಕ್ಷದ ರಜತ ಮಹೋತ್ಸವ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಕೊರಳಿಗೆ ಐದು ಕೋಟಿ ರೂಪಾಯಿ ಮೌಲ್ಯದ ಸಾವಿರ ರೂಪಾಯಿ ನೋಟುಗಳ ಭಾರೀ ಮಾಲೆಯನ್ನು ಹಾಕಿದ್ದು ಬಿಎಸ್‌ಪಿ ಕರ್ನಾಟಕ ಘಟಕ ಎಂಬ ಕುತೂಹಲ ಮತ್ತು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ತನ್ನ ಹುಟ್ಟುಹಬ್ಬದ ಸಂದರ್ಭಗಳೆಲ್ಲ ನಿಧಿ ಸಂಗ್ರಹ ಮುಂತಾದ ನಡೆಗಳಿಂದ ವಿವಾದಕ್ಕೆಡೆ ಮಾಡುವ ಮಾಯಾ, ಇದೀಗ ಪಕ್ಷದ ಬೆಳ್ಳಿ ಹಬ್ಬ ಮತ್ತು ಪಕ್ಷದ ಸಂಸ್ಥಾಪಕ ಕಾನ್ಶೀರಾಂ ಅವರ 76ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನೋಟುಗಳ ಮಾಲೆಯನ್ನೇ ಅರ್ಪಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಸಾವಿರ ರೂಪಾಯಿಗಳ ಸಾವಿರಾರು ನೋಟುಗಳನ್ನು ಬಳಸಿ ಸಿದ್ಧಪಡಿಸಲಾಗಿದ್ದ ಬೃಹತ್ ಹಾರವನ್ನು ಮಾಯಾವತಿ ಕೊರಳಿಗೆ ಕಾರ್ಯಕ್ರಮದಲ್ಲಿ ಹಾಕಲಾಗಿತ್ತು. ಆದರೆ ಈ ಹಾರದ ಹಿಂದಿನ ವ್ಯಕ್ತಿಗಳು ಯಾರು ಎಂಬುದನ್ನು ರಹಸ್ಯವಾಗಿಡಲು ಯತ್ನಿಸಲಾಗಿತ್ತು.

ಅಲ್ಲದೆ ಈ ಬೃಹತ್ ಮಾಲೆಯಲ್ಲಿ ಎಷ್ಟು ನೋಟುಗಳಿದ್ದವು, ಅದರ ಒಟ್ಟು ಮೌಲ್ಯವೆಷ್ಟು ಎಂಬುದು ಕೂಡ ಇದುವರೆಗೂ ನಿಗೂಢವಾಗಿಯೇ ಉಳಿದಿದೆ. ಅಂದಾಜುಗಳ ಪ್ರಕಾರ ಎರಡು ಕೋಟಿಯಿಂದ ಐದು ಕೋಟಿ ರೂಪಾಯಿಗಳಷ್ಟು ಮೌಲ್ಯದ ನೋಟುಗಳು ಇದರಲ್ಲಿವೆ.

ಆದರೂ ಮೂಲಗಳ ಪ್ರಕಾರ ಇದನ್ನು ಹಾಕಿದ್ದು ಬಿಎಸ್‌ಪಿ ಕರ್ನಾಟಕ ಘಟಕ. ಆದರೆ ತಾವು ಈ ದುಬಾರಿ ಹಾರವನ್ನು ನಿರ್ಮಿಸಿ ಹಾಕಿದ್ದೇವೆ ಎಂಬ ವರದಿಗಳನ್ನು ಕರ್ನಾಟಕ ಘಟಕದ ಸಂಯೋಜಕ ವಿ.ಎನ್. ಶರ್ಮಾ ತಳ್ಳಿ ಹಾಕಿದ್ದಾರೆ.

ಅಲ್ಲದೆ ದೇಶದಾದ್ಯಂತದ ಬಿಎಸ್‌ಪಿ ಕಾರ್ಯಕರ್ತರಿಂದ ಇದಕ್ಕಾಗಿ ಹಣವನ್ನೇ ಪಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಕರ್ನಾಟಕ ಬಿಎಸ್‌ಪಿ ಅಧ್ಯಕ್ಷ ಎನ್. ಮಹೇಶ್ ಅವರನ್ನು ಸಂಪರ್ಕಿಸಲು ನಡೆಸಿದ ಯತ್ನ ವಿಫಲವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ ಈ ನೋಟಿನ ಮಾಲೆಯನ್ನು ಎಲ್ಲಾ ರಾಜ್ಯಗಳ ಬಿಎಸ್‌ಪಿ ಮುಖ್ಯಸ್ಥರು ಸೇರಿ ನಿರ್ಮಿಸಿದ್ದಾರೆ. ಇದಕ್ಕೆ ಕಾರ್ಯಕರ್ತರ ಹಣವನ್ನು ಬಳಸಿಲ್ಲ.

ಮಾಯಾವತಿ ಕರೆನ್ಸಿ ಹಾರದ ಬಗ್ಗೆ ಇದೀಗ ಸಮಾಜವಾದಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿವೆ.

ಈ ರೀತಿ ಹಣವನ್ನು ಮೆರೆಸುವುದು ಪ್ರಜಾಪ್ರಭುತ್ವ ನೀತಿಗೆ ವಿರುದ್ಧವಾದುದು. ಅಲ್ಲದೆ ಕಾಲ್ತುಳಿತ ಸಂತ್ರಸ್ತರಿಗೆ ನೀಡಲು ಹಣವಿಲ್ಲ ಎಂದು ಹೇಳಿದ ಅದೇ ಮುಖ್ಯಮಂತ್ರಿ ಇಂದು ನೋಟುಗಳ ಹಾರವನ್ನು ಹಾಕಿಸಿಕೊಂಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಆಗ್ರಹಿಸಿದ್ದಾರೆ.

ಇದಕ್ಕೂ ಮೊದಲು ಸುಮಾರು 20 ಲಕ್ಷ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರಿದ್ದ ಲಕ್ನೋದ ರಾಮಾಭಾಯ್ ಅಂಬೇಡ್ಕರ್ ಮೈದಾನಕ್ಕೆ ಹೆಲಿಕಾಫ್ಟರ್‌ನಲ್ಲೇ ಬಂದಿಳಿದ ಮಾಯಾವತಿ ಉದ್ಘೋಷದೊಂದಿಗೆ ವೇದಿಕೆ ಏರಿದರು. ವೇದಿಕೆಯ ನಡುವೆ ನಿರ್ಮಿಸಲಾಗಿದ್ದ ವಿಶೇಷ ಕುರ್ಚಿಯಲ್ಲಿ ಮಾಯಾವತಿ ಕುಳಿತುಕೊಂಡರೆ, ಅವರಿಗಿಂತ ತುಂಬಾ ದೂರದಲ್ಲಿ ಕೆಲವೇ ಕೆಲವು ಸಚಿವರುಗಳು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಕೆಲವರಿಗೆ ಕುಳಿತುಕೊಳ್ಳುವ ಅವಕಾಶವನ್ನು ನೀಡಲಾಗಿರಲಿಲ್ಲ.

ತನ್ನ ಭಾಷಣದುದ್ದಕ್ಕೂ ಕಾಂಗ್ರೆಸ್, ಸಮಾಜವಾದಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮಾಯಾವತಿ, ದಲಿತ ಮಹಿಳೆಯೊಬ್ಬಳು ಅಧಿಕಾರದಲ್ಲಿರವುದನ್ನು ವಿರೋಧ ಪಕ್ಷಗಳು ಸಹಿಸುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ