200 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳ್ಳಿ ಹಬ್ಬವನ್ನು ಸಂಭ್ರಮದಲ್ಲೇ ಆಚರಿಸುತ್ತಿದ್ದ ಸಂದರ್ಭದಲ್ಲಿ ಜೇನ್ನೊಣಗಳು ನಡೆಸಿದ್ದರ ಹಿಂದೆ ವಿರೋಧ ಪಕ್ಷಗಳ ಪಿತೂರಿಯಿದೆ ಎಂದು ಆರೋಪಿಸಿರುವ ಬಿಎಸ್‌ಪಿ ಅಧಿನಾಯಕಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಘಟನೆಯ ಬಗ್ಗೆ ಉನ್ನತ ತನಿಖೆಗೆ ಆದೇಶ ನೀಡಿದ್ದಾರೆ!
ಲಕ್ನೋದ ಅಂಬೇಡ್ಕರ್ ಮೈದಾನದಲ್ಲಿ ನಿನ್ನೆ ಬಿಎಸ್‌ಪಿ ಪಕ್ಷದ 25ನೇ ವರ್ಷದ ಸಂಭ್ರಮಾಚರಣೆ ವೇಳೆ ಮಾಯಾವತಿಯವರು ಭಾಷಣ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಜೇನು ನೊಣಗಳು ದಾಳಿ ನಡೆಸಿದ್ದವು.
ಮಧ್ಯಾಹ್ನ ಸುಮಾರು ಒಂದು ಗಂಟೆಯ ಹೊತ್ತಿಗೆ ಈ ದಾಳಿ ನಡೆಯುತ್ತಿದ್ದ ಹಾಗೆ ಮಾಯಾವತಿಯವರ ಭದ್ರತಾ ಸಿಬ್ಬಂದಿಗಳು ಜಾಗೃತರಾಗಿ ವೇದಿಕೆಯನ್ನು ಸುತ್ತುವರಿದು ರಕ್ಷಣೆ ಒದಗಿಸಲು ಸಿದ್ಧರಾಗಿದ್ದರು. ಆದರೆ ಸ್ವಲ್ಪವೇ ಹೊತ್ತಿನಲ್ಲಿ ಜೇನು ನೊಣಗಳು ಅಲ್ಲಿಂದ ಹೊರಟು ಹೋಗಿದ್ದವು ಎಂದು ವರದಿಗಳು ಹೇಳಿವೆ.
ಈ ಸಂದರ್ಭದಲ್ಲಿ ಕೆಲವು ಕ್ಷಣಗಳ ಕಾಲ ದಿಕ್ಕೆಟ್ಟಂತಾಗಿದ್ದ ಅಧಿಕಾರಿಗಳು ಉಸಿರು ಬಿಗಿ ಹಿಡಿದು ಮುಂದೇನಾಗುತ್ತದೆ ಎಂಬಂತೆ ಕಾಯುತ್ತಿದ್ದರು. ಅದೃಷ್ಟವಷಾತ್ ಸುಮಾರು 15ರಿಂದ 20 ನಿಮಿಷಗಳಲ್ಲಿ ಜೇನ್ನೊಣಗಳು ಮಾಯವಾಗಿ ಬಿಟ್ಟಿದ್ದವು.
ಆದರೆ ಇದು ವಿರೋಧ ಪಕ್ಷಗಳ ಪಿತೂರಿಯಿರಬಹುದು ಎನ್ನುವುದು ಬಿಎಸ್‌ಪಿ ಶಂಕೆಯಾಗಿದ್ದು, ಇದೇ ಕಾರಣದಿಂದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮಾಯಾವತಿ ಆದೇಶ ನೀಡಿದ್ದಾರೆ.
ಅಧಿಕೃತ ಮಾಹಿತಿಗಳ ಪ್ರಕರಾ ಲಕ್ನೋದ ಡಿಐಜಿ ರಾಜೀವ್ ಕೃಷ್ಣ ಅವರು ತನಿಖೆ ನಡೆಸಲಿದ್ದಾರೆ. ಪಕ್ಕದ ಕೇಂದ್ರೀಯ ವಿದ್ಯಾಲಯದಿಂದ ಈ ಜೇನ್ನೊಣಗಳು ಬಂದಿದ್ದವು ಎಂದು ತಿಳಿದು ಬಂದಿದ್ದು, ಜೇನು ನೊಣಗಳ ಗೂಡಿಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯ ಬಳಿಕ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಯಾವತಿಯವರಿಗೆ ಐದು ಕೋಟಿ ರೂಪಾಯಿ ಮೊತ್ತದ ನೋಟುಗಳುಳ್ಳ ಮಾಲೆಯನ್ನು ಹಾಕಲಾಗಿತ್ತು ಎಂಬ ಆರೋಪಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಈ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಇದೀಗ ಕಿಡಿ ಕಾರಿವೆ.