ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಟ್ಟಡ ವಿವಾದ; ಸಿಮಿ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್
(SIMI | Muslim Terror outfit | Students Islamic Movement of India | Delhi High Court)
ಸರಕಾರ ವಶಕ್ಕೆ ತೆಗೆದುಕೊಂಡಿರುವ ರಾಷ್ಟ್ರ ರಾಜಧಾನಿಯಲ್ಲಿನ ತನ್ನ ಕಟ್ಟಡವನ್ನು ಬಿಟ್ಟುಕೊಡಬೇಕು ಎಂದು ನಿಷೇಧಿತ 'ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆ' (ಸಿಮಿ) ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿದೆ.
ದೆಹಲಿಯ ಝಾಕಿರ್ ನಗರದ ಗಾಲಿ 9 ಎಂಬಲ್ಲಿನ '151-ಸಿ' ಕಟ್ಟಡದ ಮರು ಸ್ವಾಧೀನಕ್ಕೆ ನಿರ್ದೇಶನ ನೀಡಬೇಕೆಂದು ಸಿಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು, ಸರಕಾರಕ್ಕೆ ನಿರ್ದೇಶನ ನೀಡಲು ನಿರಾಕರಿಸಿದ್ದಾರೆ.
ಸಿಮಿ ಅಥವಾ ಅದರ ಅಧ್ಯಕ್ಷ ಶಾಹಿದ್ ಬಾದರ್ ಫಲಾಹಿ ಕಟ್ಟಡದಲ್ಲಿ ಹಕ್ಕು ಹೊಂದಿಲ್ಲ, ಈ ಕಟ್ಟಡವು ಹಬೀಬುಲ್ಲಾಹ್ ಸಿದ್ಧಿಕಿ ಎಂಬವರಿಗೆ ಸೇರಿದ್ದು ಎಂದು ಮಹಾನಗರ ಪಾಲಿಕೆಯ ದಾಖಲೆಗಳು ತೋರಿಸುತ್ತಿದ್ದುದನ್ನು ಗೃಹ ಸಚಿವಾಲಯದ ನಿರ್ದೇಶಕರು ಅಫಿದಾವತ್‌ನಲ್ಲಿ ತಿಳಿಸಿದ್ದರು.
ಮನೆಯ ಒಡೆತನದ ಕುರಿತು ವಿವರಗಳನ್ನು ನೀಡುವಂತೆ ಸಿಮಿ ಸಂಘಟನೆಗೆ ತನ್ನ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಸೂಚಿಸಿತ್ತು.
ಈ ಮನೆಗೆ ಯಾವುದೇ ರಕ್ಷಣೆ ನೀಡಲಾಗುತ್ತಿಲ್ಲ, ಇದು ಸಂಪೂರ್ಣ ನಿರ್ಲಕ್ಷ್ಯತೆಗೊಳಗಾಗಿದೆ. ಅನುಮತಿಯಿಲ್ಲದೆ ಪ್ರವೇಶ ನಿರಾಕರಿಸುವ ಅಥವಾ ಅನಧಿಕೃತ ಪ್ರವೇಶವನ್ನು ತಡೆಯಲು ಅಲ್ಲಿ ಭದ್ರತಾ ಸಿಬ್ಬಂದಿಗಳಿಲ್ಲ ಎಂದು ಸಿಮಿ ತನ್ನ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಭಯೋತ್ಪಾದನಾ ಚಟುವಟಿಕೆಗಳ ಆರೋಪಗಳ ಹಿನ್ನೆಲೆಯಲ್ಲಿ ಸಿಮಿ ಸಂಘಟನೆ ಮೇಲೆ 2001ರಲ್ಲಿ ಕೇಂದ್ರ ಸರಕಾರವು ನಿಷೇಧ ಹೇರಿತ್ತು. ಅಲ್ಲದೆ ಕಾನೂನು ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ಸಂಘಟನೆ ಅಧ್ಯಕ್ಷ ಫಲಾಹಿಯನ್ನು ಬಂಧಿಸಿ, ಅದರ ಕಟ್ಟಡಕ್ಕೆ ಬೀಗ ಜಡಿಯಲಾಗಿತ್ತು.
ಬಳಿಕ 2008ರ ಆಗಸ್ಟ್ ತಿಂಗಳಲ್ಲಿ ಸಂಘಟನೆಯ ಮೇಲಿನ ನಿಷೇಧವನ್ನು ದೆಹಲಿ ಹೈಕೋರ್ಟ್ ವಿಶೇಷ ನ್ಯಾಯಾಧಿಕರಣವು ತೆರವುಗೊಳಿಸಿತ್ತು. ಆದರೆ ಈ ಆದೇಶಕ್ಕೆ ಆಗಸ್ಟ್ 6ರಂದು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.
2003ರ ಮುಂಬೈ ಸರಣಿ ಬಾಂಬ್ ಸ್ಫೋಟ, 2008ರ ಅಹಮದಾಬಾದ್, ಜೈಪುರ ಮತ್ತು ದೆಹಲಿ ಬಾಂಬ್ ಸ್ಫೋಟ ಪ್ರಕರಣಗಳು ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಸಿಮಿ ಪಾಲ್ಗೊಂಡಿದೆ ಎಂದು ಆರೋಪಿಸಲಾಗಿದ್ದು, ಪ್ರಕರಣಗಳು ನ್ಯಾಯಾಲಯಗಳಲ್ಲಿವೆ.