ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಪಕ್ಷ ರಾಜಕೀಯವನ್ನು ಸ್ವಚ್ಛಗೊಳಿಸುತ್ತದೆ: ಬಾಬಾ ರಾಮದೇವ್
(Baba Ramdev | political party | Yoga guru | Bharat Swabhimaan)
ನನ್ನ ಪಕ್ಷ ರಾಜಕೀಯವನ್ನು ಸ್ವಚ್ಛಗೊಳಿಸುತ್ತದೆ: ಬಾಬಾ ರಾಮದೇವ್
ನವದೆಹಲಿ, ಮಂಗಳವಾರ, 16 ಮಾರ್ಚ್ 2010( 18:18 IST )
ರಾಜಕೀಯ ಪಕ್ಷವೊಂದನ್ನು ಅಸ್ತಿತ್ವಕ್ಕೆ ತಂದಿರುವ ಯೋಗ ಗುರು ಬಾಬಾ ರಾಮದೇವ್ ಮಂಗಳವಾರ ನವದೆಹಲಿಯಲ್ಲಿ ರಾಜಕೀಯ ಪ್ರವೇಶವನ್ನು ಪ್ರಕಟಿಸಿದ್ದು, ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ 'ಭಾರತ್ ಸ್ವಾಭಿಮಾನ್' ಪಕ್ಷದಿಂದ ಎಲ್ಲಾ 545 ಲೋಕಸಭಾ ಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಆದರೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಅಥವಾ ಪಕ್ಷದ ಯಾವುದೇ ಹುದ್ದೆಯನ್ನು ಅಲಂಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ದೇಶದ ಪ್ರತೀ ಸಂಸದೀಯ ಕ್ಷೇತ್ರದಲ್ಲಿ ಕನಿಷ್ಠ 7ರಿಂದ 10 ಲಕ್ಷ ಸದಸ್ಯರನ್ನು ಪಕ್ಷಕ್ಕೆ ಸೇರಿಸುವ ಯೋಜನೆಯಿದೆ. ಈ ಸದಸ್ಯರು ನಿರ್ದಿಷ್ಟ ಕ್ಷೇತ್ರದಿಂದ ಸಂಸತ್ತಿಗೆ ಯಾರನ್ನು ಆರಿಸಬೇಕೆಂಬ ಸಮರ್ಥ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದರು.
ಅದೇ ಹೊತ್ತಿಗೆ ವಿದೇಶಗಳ ಬ್ಯಾಂಕ್ ಖಾತೆಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರಲು ಸಾಧ್ಯವಾದಲ್ಲಿ ದೇಶವು ವಿಶ್ವದಲ್ಲೇ ಸೂಪರ್ ಪವರ್ ಆಗಿ ಹೊರ ಹೊಮ್ಮಲಿದೆ ಎಂದು ರಾಮದೇವ್ ಅಭಿಪ್ರಾಯಪಟ್ಟರು.
ವಿದೇಶಿ ಬ್ಯಾಂಕುಗಳಲ್ಲಿರುವ ಸುಮಾರು 300 ಲಕ್ಷ ಕೋಟಿ ರೂಪಾಯಿ ಹಣವನ್ನು ಮರಳಿಸಿ, ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಹೂಡಿಕೆ ಮಾಡಬೇಕು. ಎಷ್ಟು ಬೇಗ ಈ ಕಪ್ಪುಹಣವನ್ನು ಹಿಂದಕ್ಕೆ ಪಡೆಯಲಾಗುತ್ತದೋ, ಆಗ ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಬದಲಾಗುತ್ತದೆ. 2020ರೊಳಗೆ ನಮಗೆ ಹಣವನ್ನು ವಾಪಸ್ ಪಡೆಯುವುದು ಸಾಧ್ಯವಾಗಬೇಕು ಎಂದರು.
ಲಕ್ನೋದಲ್ಲಿ ನಡೆದ ಬಹುಜನ ಸಮಾಜವಾದಿ ಪಕ್ಷದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಬಹುಕೋಟಿ ಮೊತ್ತದ ಹಾರವನ್ನು ಸ್ವೀಕರಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯತ್ತ ರಾಮದೇವ್ ಇದೇ ಸಂದರ್ಭದಲ್ಲಿ ಕಿಡಿ ಕಾರಿದ್ದಾರೆ.
ಮಾಯಾವತಿಯಂತಹ ವ್ಯಕ್ತಿಗಳು ಯಾವತ್ತೂ ನಮಗೆ ಆತಂಕ ತರುತ್ತಾರೆ. ದೇಶದ ಸಂಪತ್ತನ್ನು ದಲಿತರು ಮತ್ತು ಬಡವರ ಏಳ್ಗೆಗಾಗಿ ಬಳಸಬೇಕೇ ಹೊರತು ಈ ರೀತಿ ಕೊರಳಿಗೆ ದುಬಾರಿ ಹಾರಗಳನ್ನು ಅಲಂಕರಿಸುವ ಮೂಲಕವಲ್ಲ ಎಂದು ಅವರು ತಿಳಿಸಿದ್ದಾರೆ.