ಕರ್ನಾಟಕದಲ್ಲಿ ಕೇವಲ ಐದೇ ಮಂದಿ ಮಹಿಳಾ ಶಾಸಕರು ಇದ್ದಾರೆಂಬುದು ಗೊತ್ತೇ ಇದೆ. ಒಟ್ಟಾರೆ ದೇಶದ ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡರೆ ಪುರುಷರಿಗೆ ಹೋಲಿಸಿದಾಗ ಶೇ.8ರಷ್ಟು ಮಹಿಳೆಯರು ಮಾತ್ರ 28 ರಾಜ್ಯಗಳಲ್ಲಿ ಶಾಸಕರಾಗಿದ್ದಾರೆ ಎಂಬ ಮಾಹಿತಿ ಇದೀಗ ತಿಳಿದು ಬಂದಿದೆ.
ಕೇಂದ್ರ ಸರಕಾರವು ತನ್ನ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಯೋಜನೆ ಜಾರಿಗೆ ತರಲು ಹರಸಾಹಸ ಪಡುತ್ತಿದೆ. ಮಹಿಳೆಯರಿಗೆ ರಾಜ್ಯ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಶೇ.33ರ ಮೀಸಲಾತಿ ನೀಡಬೇಕೆಂಬುದು ಈ ಮಸೂದೆಯ ತಾತ್ಪರ್ಯ. ಈ ಹಿನ್ನೆಲೆಯಲ್ಲಿ ಪ್ರಸಕ್ತ ರಾಜ್ಯಗಳಲ್ಲಿ ಶಾಸಕಿಯರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬ ವಿವರಣೆಯನ್ನು ಈ ವರದಿ ನೀಡುತ್ತದೆ.
ದೇಶದ ಒಟ್ಟು 28 ರಾಜ್ಯ ವಿಧಾನಸಭೆಗಳಲ್ಲಿನ 4,030 ಶಾಸಕರಲ್ಲಿ ಕೇವಲ 311 ಶಾಸಕರು (ಮೀಸಲಾತಿ ಜಾರಿಯಾದರೆ ಸುಮಾರು 1330 ಶಾಸಕಿಯರು ಆಯ್ಕೆಯಾಗಲಿದ್ದಾರೆ) ಮಾತ್ರ ಮಹಿಳೆಯರು ಮತ್ತು 60 ಶಾಸಕರನ್ನು ಹೊಂದಿರುವ ನಾಗಾಲೆಂಡ್ ವಿಧಾನಸಭೆಯಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕಿಯಿಲ್ಲ ಮುಂತಾದ ಕುತೂಹಲಕರ ಮಾಹಿತಿ ವಿಧಾನಸಭೆಗಳ ವೆಬ್‌ಸೈಟ್ ಜಾಲಾಡಿದಾಗ ತಿಳಿದು ಬಂದಿದೆ.
WD
200 ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುವ ರಾಜಸ್ತಾನ ದೇಶದಲ್ಲೇ ಅತೀ ಹೆಚ್ಚು (ಶೇ.14.5) ಮಹಿಳಾ ಶಾಸಕರನ್ನು ಹೊಂದಿದೆ. ಇಲ್ಲಿ 29 ಮಹಿಳಾ ಶಾಸಕರಿದ್ದಾರೆ. ಇದರ ನಂತರದ ಸ್ಥಾನ ಆಂಧ್ರಪ್ರದೇಶದ್ದು. 249 ಶಾಸಕರನ್ನು ಹೊಂದಿರುವ ತೆಲುಗು ಭಾಷಿಗರ ನಾಡು 36 ಮಹಿಳಾ ಶಾಸಕರನ್ನು (ಶೇ.12) ಹೊಂದಿದೆ.
ಎಡಪಕ್ಷ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಲದಲ್ಲಿ ಶೇ.11.5ರ ಪ್ರಮಾಣದಲ್ಲಿ ಮಹಿಳೆಯರು ಅಧಿಕಾರಯುತ ಸ್ಥಾನದಲ್ಲಿದ್ದಾರೆ. ಇಲ್ಲಿನ 294 ಸ್ಥಾನಗಳಲ್ಲಿ 34 ಮಹಿಳೆಯರು ಶಾಸಕ ಸ್ಥಾನವನ್ನು ಅಲಂಕರಿಸಿದ್ದಾರೆ.
ದೇವರ ಸ್ವಂತ ನಾಡು ಎಂಬ ಖ್ಯಾತಿಯ ಮತ್ತು ಗರಿಷ್ಠ ಸಾಕ್ಷರತೆಯ ರಾಜ್ಯದಲ್ಲಿರುವುದು ಕೇವಲ ಶೇ.5ರಷ್ಟು ಮಹಿಳೆಯರು ಮಾತ್ರ ಶಾಸಕರು. ಅಂದರೆ 140 ಶಾಸಕರ ಭವನದಲ್ಲಿ ಶೇ.ಏಳರಷ್ಟು ಮಾತ್ರ ಮಹಿಳೆಯರಿದ್ದಾರೆ.
ನಾಗಾಲೆಂಡ್‌ಗಿಂತ ಇತರ ಈಶಾನ್ಯ ರಾಜ್ಯಗಳು ಕೊಂಚ ವಾಸಿ. ಇಲ್ಲಿನ ಮೇಘಾಲಯ ಮತ್ತು ಮಣಿಪುರಗಳಲ್ಲಿ ತಲಾ ಒಬ್ಬೊಬ್ಬರು ಮಹಿಳಾ ಶಾಸಕರಿದ್ದಾರೆ. ಎರಡೂ ಸದನಗಳು 60 ಸ್ಥಾನಗಳನ್ನು ಹೊಂದಿವೆ.
224 ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಕೇವಲ ಐದು ಮಂದಿ ಮಹಿಳೆಯರು ಮಾತ್ರ ಶಾಸಕರಾಗಿದ್ದಾರೆ. ಶೋಭಾ ಕರಂದ್ಲಾಜೆ, ಸೀಮಾ ಮಸೂತಿ, ಮಲ್ಲಿಕಾ ಪ್ರಸಾದ್, ಅನಿತಾ ಕುಮಾರಸ್ವಾಮಿ, ಕಲ್ಪನಾ ಸಿದ್ದರಾಜು ಅವರೇ ಈಗ ಶಾಸಕಿಯರಾಗಿರುವವರು. ಮಹಿಳಾ ಮೀಸಲಾತಿ ಜಾರಿಗೆ ಬಂದಲ್ಲಿ ಕರ್ನಾಟಕವು 74 ಮಹಿಳಾ ಶಾಸಕಿಯರನ್ನು ಹೊಂದಲಿದೆ.
ಮಧ್ಯಪ್ರದೇಶದ 231 ಸ್ಥಾನಗಳಲ್ಲಿ 26, ಛತ್ತೀಸಗಢದ 90 ಸ್ಥಾನಗಳಲ್ಲಿ 10, ಬಿಹಾರದ 243 ಸ್ಥಾನಗಳಲ್ಲಿ 26, ಅಸ್ಸಾಂನ 126 ಸ್ಥಾನಗಳಲ್ಲಿ 13, ಹರ್ಯಾಣದ 90 ಶಾಸಕರಲ್ಲಿ ಒಂಬತ್ತು ಮಹಿಳೆಯರು ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿನ 288 ಶಾಸಕರಲ್ಲಿ ಕೇವಲ 10 ಮಂದಿ ಮಾತ್ರ ಮಹಿಳೆಯರಿದ್ದಾರೆ. ಮಹಿಳೆಯೇ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದ 403 ಶಾಸಕರಲ್ಲಿ 27 ಮಂದಿ ಶಾಸಕಿಯರಿದ್ದಾರೆ.
ಗೋವಾದ 40 ಶಾಸಕರಲ್ಲಿ ಒಬ್ಬ ಮಹಿಳೆ, ಪಂಜಾಬ್‌ನ 117 ಶಾಸಕರಲ್ಲಿ ಎಂಟು, ಜಾರ್ಖಂಡ್‌ನ 81 ಸ್ಥಾನಗಳಲ್ಲಿ ಎಂಟು ಶಾಸಕಿಯನ್ನು ಹೊಂದಿದೆ.